ಮಹಾರಾಷ್ಟ್ರ: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ ಆಗದೆ ಕಾಂಗ್ರೆಸ್ ಕರ್ನಾಟಕ ಜನತೆಗೆ ವಂಚಿಸಿದ್ದಾಗಿ ಮಹಾರಾಷ್ಟ್ರ ಬಿಜೆಪಿ ಸುಳ್ಳು ಜಾಹಿರಾತು ನೀಡಿದೆ, ಇವರಿಗೆ ನಾಚಿಕೆ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಡರಪುರ ಮಂಗಳ್ ವೇಡಾದಲ್ಲಿ ಆಯೋಜಿಸಿದ್ದ ರಾಜ್ಯ ಕಾಂಗ್ರೆಸ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಬಹಿರಂಗ ಸವಾಲ್ ಎಸೆದಿದ್ದಾರೆ.
ಬಿಜೆಪಿಯ ಮೋದಿ ಮತ್ತು ಸುಳ್ಳಿನ ಸರದಾರರೇ ಕರ್ನಾಟಕಕ್ಕೆ ಬಂದು ನೋಡಿ. ನಿಮಗೆ ವಿಶೇಷ ವಿಮಾನದ ವ್ಯವಸ್ಥೆ ನಾನೇ ಮಾಡ್ತೀನಿ. ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿ ಆಗಿಲ್ಲ ಎಂದರೆ ನಾನು ರಾಜೀನಾಮೆ ಕೊಡ್ತೀನಿ. ನಮ್ಮ ನೆಲದಲ್ಲಿ ಗ್ಯಾರಂಟಿಗಳು ಜಾರಿ ಆಗಿರುವುದು ಸತ್ಯ ಆದರೆ ನಿಮ್ಮ ಸುಳ್ಳುನ ಜಾಹಿರಾತನ್ನು ವಾಪಾಸ್ ಪಡೆದು ಮಹಾರಾಷ್ಟ್ರ ಜನತೆಯ ಕ್ಷಮೆ ಕೇಳಬೇಕು. ಈ ಸವಾಲು ಸ್ವೀಕರಿಸುತ್ತೀರಾ ಎಂದು ಸವಾಲು ಹಾಕಿದರು.
ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ನನ್ನ ರಾಜ್ಯದ ಕೋಟಿ ಕೋಟಿ ಜನರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇಲ್ಲೂ ಮಹಾ ಆಘಾಡಿ ಅಧಿಕಾರಕ್ಕೆ ಬಂದು ಎಲ್ಲಾ ಭರವಸೆಗಳನ್ನು ಈಡೇರಿಸುವುದು ಶತಸಿದ್ದ. ಏಕೆಂದರೆ ನುಡಿದಂತೆ ನಡೆದ ಚರಿತ್ರೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದರು.
ಮಹಾ ವಿಕಾಸ್ ಆಘಾಡಿ ಮಾತ್ರ ಕೊಟ್ಟ ಭರವಸೆಗಳನ್ನು ಈಡೇರಿಸಿ ಮಹಾರಾಷ್ಟ್ರ ಜನರ ಬದುಕಿಗೆ ಆರ್ಥಿಕ ಶಕ್ತಿ ನೀಡುತ್ತದೆ. ಆದ್ದರಿಂದ ಬಿಜೆಪಿ ಸೋಲಿಸಿ ಆರ್ಥಿಕ ಶಕ್ತಿ ಪಡೆಯಿರಿ ಎಂದು ಕರೆ ನೀಡಿದರು.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಸಂಸದೆ ಪ್ರಣತಿ ಶಿಂಧೆ, ಸಚಿವರಾದ ಎಂ.ಪಿ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


