ನಿನ್ನೆ ( ಡಿಸೆಂಬರ್ 15 ) ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ 45 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಿಸಿರುವ ಚೊಚ್ಚಲ ಚಿತ್ರ ಇದಾಗಿದ್ದು, ಈ ಕಾರಣಕ್ಕೆ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.
ಸಂಗೀತ ನಿರ್ದೇಶಕ ಮೂವರು ಸ್ಟಾರ್‌ಗಳನ್ನು ಇಟ್ಟುಕೊಂಡು ಹೇಗೆ ಸಿನಿಮಾ ಮಾಡ್ತಾರಪ್ಪ ಎನ್ನುತ್ತಿದ್ದ ಸಿನಿ ರಸಿಕರಿಗೆ ಅರ್ಜುನ್ ಜನ್ಯ ಟ್ರೈಲರ್ ಮೂಲಕ ಒಳ್ಳೆಯ ರೀತಿಯಲ್ಲೆ ಉತ್ತರ ಕೊಟ್ಟಿದ್ದಾರೆ. ಟ್ರೈಲರ್ ವಿಭಿನ್ನವಾಗಿ ಮೂಡಿಬಂದಿದ್ದು, ಚಿತ್ರ ಯಾವ ಕಥೆ ಮೇಲೆ ಆಧಾರವಾಗಿರಬಹುದು ಎಂಬ ಕುತೂಹಲವನ್ನು ಕೆರಳಿಸಿದೆ.
ಇನ್ನು ಟ್ರೈಲರ್‌ನಲ್ಲಿ ಉಪ್ಪಿ ಹಾಗೂ ಶಿವಣ್ಣ ಗ್ಯಾಂಗ್‌ಸ್ಟರ್‌ಗಳ ಹಾಗೆ ಕಾಣಿಸಿಕೊಂಡಿದ್ದು, ಟ್ರೈಲರ್‌ನ ಕೊನೆಯ ದೃಶ್ಯದಲ್ಲಿ ಶಿವಣ್ಣ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿರುವುದು ನೋಡುಗರ ಗಮನ ಸೆಳೆಯುವಂತೆ ಮಾಡಿದೆ. ಒಂದೆಡೆ ಶಿವಣ್ಣ ಮಹಿಳೆಯ ವೇಷದಲ್ಲಿ ಮಿಂಚಿದರೆ, ಅದನ್ನು ಕಂಡು ಉಪೇಂದ್ರ ಚೆಲುವೆಯ ನೋಟ ಚೆನ್ನ ಎಂದು ಹಾಡಿದ್ದಾರೆ.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ನಿನ್ನೆ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೂ ಸಹ ಈ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ಚಿತ್ರದಲ್ಲಿ ಮೂರು ಜನ ಸ್ಟಾರ್‌ಗಳು ಎಂದು ಹೇಳುತ್ತಿದ್ದೀರ ಆದರೆ ತೆರೆ ಹಿಂದೆ ಮೂವರು ಸ್ಟಾರ್‌ಗಳಿದ್ದಾರೆ ಎಂದ ಉಪ್ಪಿ ಮೊದಲ ಸ್ಟಾರ್ ಹಣ ಸುರಿದ ನಿರ್ಮಾಪಕರು, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಛಾಯಾಗ್ರಾಹಕ ಸತ್ಯ ಹೆಗ್ಗಡೆ ಮೂವರು ನಿಜವಾದ ಸ್ಟಾರ್‌ಗಳು ಎಂದರು.
ಹೀಗೆ ಮೂವರನ್ನು ಹೊಗಳಿದ ಬಳಿಕ ಶಿವಣ್ಣನನ್ನು ಉಲ್ಲೇಖಿಸಿದ ಉಪ್ಪಿ ಹ್ಯಾಟ್ರಿಕ್ ಹೀರೊ, ಕರುನಾಡ ಕಣ್ಮಣಿ ಎಲ್ಲ ನೀವು, ನಮ್ಮ ಭಾಗ್ಯ ಇಂಥವರ ಜತೆ 30 ವರ್ಷಗಳಿಂದ ಇವರಿಗೆ ನಿರ್ದೇಶನ ಮಾಡಿ, ಜತೆಗೆ ನಟನೆ ಮಾಡಿ ಇನ್ನೂ ಸಹ ಅವರ ಜತೆಗಿನ ಸಂಬಂಧವನ್ನು ಹಾಗೆಯೇ ಉಳಿಸಿಕೊಂಡಿರುವುದು ನನ್ನ ಭಾಗ್ಯ, ಹೆಮ್ಮ ಎಂದೇ ಹೇಳುತ್ತೇನೆ ಎಂದರು.
ಇನ್ನೂ ಮುಂದುವರಿದು ಮಾತನಾಡಿದ ಉಪೇಂದ್ರ ಶಿವಣ್ಣ ಚಿನ್ನ ಅಲ್ಲ ಇದು ಅಪರಂಜಿ ಎಂದು ಯಾವಾಗಲೂ ಹೇಳುತ್ತಾ ಇರುತ್ತೇನೆ, ನಿಮ್ಮನ್ನು ಹತ್ತಿರದಿಂದ ನೋಡಿದವರು ಮಾತ್ರವಲ್ಲ, ದೂರದಿಂದ ನೋಡಿದವರೂ ನಿಮ್ಮನ್ನು ಅಷ್ಟೇ ಇಷ್ಟಪಡುತ್ತಾರೆ, ಅಷ್ಟು ಚಾರ್ಮಿಂಗ್ ನೀವು. ಒಳ್ಳೆ 25 ವರ್ಷದ ಯುವಕನ ಥರ ಡಾನ್ಸ್ ಮಾಡ್ತಾರೆ. ನೋಡಿದ್ರಲ್ಲ ‘ಚೆಲುವೆಯ ನೋಟ ಚೆನ್ನ’ ಎಂದು ಹಾಡು ಹಾಡಿ ಶಿವಣ್ಣನ ಕೆನ್ನೆ ಮುಟ್ಟಿ ಟ್ರೈಲರ್‌ನಲ್ಲಿ ಶಿವಣ್ಣನ ಮಹಿಳೆಯ ವೇಷದ ದೃಶ್ಯವನ್ನು ಹೊಗಳಿದರು.
ಇನ್ನು ವೇದಿಕೆಯ ಮೇಲಿದ್ದ ರಾಜ್ ಬಿ ಶೆಟ್ಟಿ ಬಗ್ಗೆ ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ಇವರು ಇವತ್ತು ಮೋಸ್ಟ್ ವಾಂಟೆಂಡ್ ಹೀರೊ. ಅವರ ಕಾಲ್‌ಶೀಟ್ ಸಿಗುವುದೇ ಕಷ್ಟವಾಗಿಬಿಟ್ಟಿದೆ. ಯಾವಾಗಲೂ ಕೇಳ್ತಾ ಇರುತ್ತೇನೆ, ರಾಜ್ ಅವರು ಬರುತ್ತಾರಾ, ಅವರು ಬಂದರೆ ಚೆನ್ನಾಗಿರುತ್ತೆ ಅಂತ, ಅಷ್ಟು ಬ್ಯುಸಿಯಾಗಿದ್ದಾರೆ. ಮೊನ್ನೆ ತಾನೇ ಸು ಫ್ರಮ್ ಸೋ ಮಾಡಿದ್ರಿ, ಇಡೀ ಕರ್ನಾಟಕ ತಿರುಗಿನೋಡುವ ಹಾಗೆ ಅದ್ಬುತವಾಗಿ ಮಾಡಿದ್ದೀರ. ನಿಮಗೂ ಅಷ್ಟೇ ಪ್ರಮೋದ್ ಶೆಟ್ಟಿಯವರೇ ನಿಮ್ಮ ಇಡೀ ತಂಡವೇ ಕನ್ನಡ ಚಿತ್ರರಂಗವನ್ನು ಮತ್ತೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದೀರ ಎಂದು ಹೊಗಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


