ನಾಮ ನಿರ್ದೇಶಿತ ಸದಸ್ಯರ ನೇಮಕದ ಮೂಲಕ ಕಾಂಗ್ರೆಸ್ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಎಲ್ಲ 5 ನಗರ ಪಾಲಿಕೆಗಳ ಚುನಾವಣೆ ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆದ್ದರಿಂದ ನಗರಾಭಿವೃದ್ಧಿ ಇಲಾಖೆ ಈ ಕುರಿತು ಸ್ಪಷ್ಟನೆಯನ್ನು ನೀಡಿದೆ, ಜನರಲ್ಲಿ ಇರುವ ಗೊಂದಲ ನಿವಾರಣೆ ಮಾಡಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸಿನಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಗಿ ಬದಲಾವಣೆ ಮಾಡಲಾಗಿದೆ. ಅಲ್ಲದೇ ನಗರದ ವಾರ್ಡ್‌ಗಳನ್ನು 5 ಪಾಲಿಕೆಯಾಗಿ ವಿಂಗಡನೆ ಮಾಡಲಾಗಿದೆ.
ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಡಿಸೆಂಬರ್ 11ರಂದು ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ, 2025 ಮಂಡಿಸಿದೆ. ಇದರ ಪ್ರಕರಣ 30ಕ್ಕೆ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯಿಂದ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿನ 5 ನಗರ ಪಾಲಿಕೆಗಳಿಗೆ 700ಕ್ಕೂ ಹೆಚ್ಚು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಸಂವಿಧಾನಕ್ಕೆ ವಿರುದ್ಧವಾಗಿ ಸರ್ಕಾರವು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಪ್ರಕ್ರಿಯೆಯಿಂದ ಸದರಿ ನಗರ ಪಾಲಿಕೆಗಳಿಗೆ ಚುನಾವಣೆ ಸದ್ಯಕ್ಕೆ ನಡೆಯುವುದಿಲ್ಲ ಎಂಬ ಗೊಂದಲ ಸಹ ಮೂಡಿದೆ. ಆದರೆ ಅಭಿಪ್ರಾಯವು ಆಧಾರ ರಹಿತವಾಗಿದೆ. ಇದು ತಿದ್ದುಪಡಿಯ ಉದ್ದೇಶವನ್ನು ಅರ್ಥ ಮಾಡಿಕೊಳ್ಳದೇ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸುವ ದುರುದ್ದೇಶದಿಂದ ಕೂಡಿರುತ್ತದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಹೇಳಿದೆ. ಆದ್ದರಿಂದ ಸ್ಪಷ್ಟನೆಗಳನ್ನು ನೀಡಲಾಗಿದೆ.
- ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಅನುಸಾರ ಕಾಲಕಾಲಕ್ಕೆ ಗ್ರೇಟರ್ ಬೆಂಗಳೂರು ಪ್ರದೇಶದ ಭೂ ಪ್ರದೇಶದ ಮಿತಿಗಳನ್ನು ಮಾರ್ಪಾಡು ಮಾಡಲು ಅವಕಾಶವನ್ನು ಕಲ್ಪಿಸಲಾಗಿದ್ದು, ನಿಯಮಾನುಸಾರ ಕ್ರಮವಹಿಸಿ ಸ್ಥಳೀಯ ಪ್ರಾಧಿಕಾರಗಳನ್ನು ಗ್ರೇಟರ್, ಬೆಂಗಳೂರು ಪ್ರದೇಶದ ವ್ಯಾಪ್ತಿಗೆ ಸೇರ್ಪಡಿಸಿಕೊಳ್ಳಬಹುದಾಗಿದೆ. ಈ ರೀತಿ ಸೇರ್ಪಡಿಸಿಕೊಳ್ಳಲಾದ ಪ್ರದೇಶವನ್ನು ಪುನರ್ ವಿಂಗಡಿಸಿ ಚುನಾವಣೆ ನಡೆಸುವವರೆವಿಗೂ ಸದರಿ ನೂತನ ಪ್ರದೇಶಕ್ಕೆ ಯಾವುದೇ ಜನಪ್ರತಿನಿಧಿ ಇಲ್ಲದಂತಾಗುತ್ತದೆ. ಸದರಿ ಪ್ರದೇಶವನ್ನು ಆ ವ್ಯಾಪ್ತಿಯ ನಗರ ಪಾಲಿಕೆಯಲ್ಲಿ ಪ್ರತಿನಿಧಿಸುವವರು ಯಾರು ಇಲ್ಲದಂತಾಗಿ ಸದರಿ ಪ್ರದೇಶದ ಆಡಳಿತ ನಿರ್ವಹಣೆ ಮತ್ತು ಬೆಳವಣಿಗೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
- ಈ ಹಿನ್ನೆಲೆಯಲ್ಲಿ ಪ್ರಕರಣ 30ಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಸೇರ್ಪಡಿಸಲಾಗುವ ಸ್ಥಳಿಯ ಪ್ರದೇಶದ ಸಾಮಾನ್ಯ ನಿವಾಸಿಯನ್ನು ಪ್ರತಿ 20 ಸಾವಿರ ಜನ ಸಂಖ್ಯೆಗೆ ಕನಿಷ್ಠ ಒಬ್ಬ ವ್ಯಕ್ತಿಯಂತೆ ಆ ನಿರ್ದಿಷ್ಟ ನಗರ ಪಾಲಿಕೆಗೆ ಹೆಚ್ಚುವರಿ ಸದಸ್ಯನಾಗಿ ನಾಮ ನಿರ್ದೇಶನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಅಂತಹ ನಾಮ ನಿರ್ದೇಶಿತ ವ್ಯಕ್ತಿಯು ಚುನಾಯಿತ ಪ್ರತಿನಿಧಿಯಾಗಿಲ್ಲದ ಕಾರಣ ಆ ನಗರ ಪಾಲಿಕೆಯಲ್ಲಿ ಮತದಾನ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ ಹಾಗೂ ಆ ಸ್ಥಳೀಯ ಪ್ರದೇಶಕ್ಕೆ ಚುನಾವಣೆ ನಡೆಸುವವರೆವಿಗೆ ಮಾತ್ರ ನಾಮ ನಿರ್ದೇಶಿತ ಸದಸ್ಯನಾಗಿ ಮುಂದುವರೆಯಲು ಅವಕಾಶವಿರುತ್ತದೆ.
- ಯಾವುದಾದರೂ ಪಂಚಾಯಿತಿ ಪ್ರದೇಶದ ಭಾಗವನ್ನು ಚಿಕ್ಕ ನಗರ ಪ್ರದೇಶದಲ್ಲಿ ವಿಲೀನಗೊಳಿಸಿದ ಸಂದರ್ಭದಲ್ಲಿ, ಮುನಿಸಿಪಲ್ ಕೌನ್ಸಿಲ್ ಅನ್ನು ಪುನರ್ ರಚಿಸುವ ತನಕ ಅಂತಹ ಪ್ರದೇಶದ ಸಾಮಾನ್ಯ ನಿವಾಸಿಯಾಗಿರುವ ವ್ಯಕ್ತಿಯನ್ನು ಹೆಚ್ಚುವರಿ ಕೌನ್ಸಿಲರ್ ಆಗಿ ಸರ್ಕಾರವು ನಾಮ ನಿರ್ದೇಶನಗೊಳಿಸುವ ಬಗ್ಗೆ ಕರ್ನಾಟಕ ಮುನಿಸಿಪಾಲಿಟಿ ಅಧಿನಿಯಮ, 1964ರ ಪ್ರಕರಣ 360 (ಡಿ) ರಲ್ಲಿಯೂ ಸಹ ಅವಕಾಶವನ್ನು ಕಲ್ಪಿಸಲಾಗಿದೆ.
- ನಾಮ ನಿರ್ದೇಶಿತ ವ್ಯಕ್ತಿಯು ಅನಿರ್ದಿಷ್ಟ ಅವಧಿಗೆ ಆ ನಗರ ಪಾಲಿಕೆಯ ಸದಸ್ಯರಾಗಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಉದ್ದೇಶದಿಂದ ಪ್ರಕರಣ 29ಕ್ಕೆ ಸಹ ತಿದ್ದುಪಡಿಯನ್ನು ಪ್ರಸ್ತಾಪಿಸಿದ್ದು, ಹೊಸದಾಗಿ ಸೇರಿಸಲಾದ ಸ್ಥಳೀಯ ಪ್ರದೇಶಕ್ಕಾಗಿ ಪುನರ್ ವಿಂಗಡನೆಯನ್ನು 3 ತಿಂಗಳುಗಳ ಅವಧಿಯೊಳಗೆ ಮಾಡತಕ್ಕದ್ದು ಎಂದು ನಿರ್ದಿಷ್ಟ ಪಡಿಸಲು ಪ್ರಸ್ತಾಪಿಸಲಾಗಿದೆ.
- ಪ್ರಕರಣ 33ಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸಿ, ಹೊಸದಾಗಿ ಸೇರಿಸಲಾದ ಸ್ಥಳೀಯ ಪ್ರದೇಶಕ್ಕಾಗಿ ಪುನರ್ ವಿಂಗಡನೆಯ ತರುವಾಯ ಆ ಪ್ರದೇಶದ ಸೇರ್ಪಡೆಯ ದಿನಾಂಕದಿಂದ 6 ತಿಂಗಳುಗಳಿಗಿಂತ ತಡವಾಗದಂತೆ ಚುನಾವಣೆಯನ್ನು ನಡೆಸತಕ್ಕದ್ದು ಎಂದು ಸೇರ್ಪಡಿಸಲು ಪ್ರಸ್ತಾಪಿಸಲಾಗಿದೆ. ಅಂದರೆ, ಪ್ರಸ್ತಾಪಿತ ನಾಮ ನಿರ್ದೇಶಿತ ವ್ಯಕ್ತಿಯು ಆ ನಗರ ಪಾಲಿಕೆಯ ಹೆಚ್ಚುವರಿ ಸದಸ್ಯರಾಗಿ ಮುಂದುವರೆಯಲು, ಕಾಲಮಿತಿಯನ್ನು ಕಲ್ಪಿಸಲಾಗಿದೆ. ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರು ಆ ನಗರ ಪಾಲಿಕೆಯ ಉಳಿದ ಅವಧಿಯವರೆಗೆ ಮಾತ್ರ ಸದಸ್ಯತ್ವವನ್ನು ಹೊಂದಿರುತ್ತಾರೆ.
ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿತ ತಿದ್ದುಪಡಿ ವಿಧೇಯಕದಲ್ಲಿ ಗಮನಿಸಬಹುದಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ಗಮನಿಸದೇ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
ನೂತನವಾಗಿ ರಚಿಸಲಾದ ನಗರ ಪಾಲಿಕೆಗಳ ವಾರ್ಡ್‌ಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ದಿನಾಂಕ 02-09-2025ರ ಪ್ರತ್ಯೇಕ ಅಧಿಸೂಚನೆಗಳಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶದ 5 ನಗರ ಪಾಲಿಕೆಗಳ ಗಡಿ ಪ್ರದೇಶಗಳನ್ನು ನಿರ್ದಿಷ್ಟಪಡಿಸಿ ನಗರ ಪಾಲಿಕೆಗಳನ್ನು ಸ್ಥಾಪಿಸಿ ಆದೇಶಿಸಲಾಗಿದೆ. ಮುಂದುವರೆದು ದಿನಾಂಕ 19-11-2025 ಮತ್ತು 01-12-2025 ರಂದು ಪ್ರತ್ಯೇಕವಾಗಿ ಹೊರಡಿಸಿರುವ ಅಧಿಸೂಚನೆಗಳ ಮೂಲಕ ನಗರ ಪಾಲಿಕೆಗಳಲ್ಲಿ ಒಟ್ಟು 369 ವಾರ್ಡ್‌ಗಳ ಪುನರ್ ವಿಂಗಡಣೆಯನ್ನು ಮಾಡಲಾಗಿದೆ. ಈ ರೀತಿ 369 ವಾರ್ಡ್‌ಗಳ ಪುನರ್ ವಿಂಗಡಣೆ ಈಗಾಗಲೇ ಆಗಿರುವುದರಿಂದ, ಸದರಿ ವಾರ್ಡ್‌ಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಅವಕಾಶವಿರುವುದಿಲ್ಲ. ಈ ವಾರ್ಡ್‌ಗಳಿಗೆ ಚುನಾವಣೆ ನಡೆಸಿ, ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಪೂರಕವಾಗಿ ದಿನಾಂಕ 01-09-2025ರ ಅಧಿಸೂಚನೆಯ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ (ಚುನಾವಣೆ) ನಿಯಮಗಳು, 2025 ಮತ್ತು ದಿನಾಂಕ 15-09-2025ರ ಅಧಿಸೂಚನೆಯ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025 ಗಳನ್ನು ಅಂತಿಮಗೊಳಿಸಿ ಹೊರಡಿಸಲಾಗಿರುತ್ತದೆ.
ರಾಜ್ಯ ಚುನಾವಣಾ ಆಯೋಗವು ಸಹ ಗ್ರೇಟರ್ ಬೆಂಗಳೂರು ಪ್ರದೇಶದ 5 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ತಯಾರಿಸುವ ಬಗ್ಗೆ ಕಾರ್ಯಕ್ರಮ ಪಟ್ಟಿಯನ್ನು ನಿಗದಿಪಡಿಸಿ, ಆ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಕ್ರಮವಹಿಸುತ್ತಿದೆ. ಸರ್ಕಾರ ಗ್ರೇಟರ್ ಬೆಂಗಳೂರು ಪ್ರದೇಶದ 5 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಎಲ್ಲಾ ಅಗತ್ಯ ಕ್ರಮವಹಿಸುತ್ತಿರುವ ಈ ಸಂದರ್ಭದಲ್ಲಿ ತಪ್ಪು ಮಾಹಿತಿಯನ್ನು ಜನರಿಗೆ ನೀಡುವುದು ಸಮಂಜಸವಲ್ಲ ಎಂದು ಹೇಳಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


