Saturday, September 19, 2026
spot_img
More
    spot_img
    HomeStateDistrict6 ದಶಕ ಕಳೆದರೂ ಪೂರ್ಣವಾಗಿಲ್ಲ ಕರ್ನಾಟಕದ ಈ ಏರ್‌ಪೋರ್ಟ್‌ ಯೋಜನೆ

    6 ದಶಕ ಕಳೆದರೂ ಪೂರ್ಣವಾಗಿಲ್ಲ ಕರ್ನಾಟಕದ ಈ ಏರ್‌ಪೋರ್ಟ್‌ ಯೋಜನೆ

    ಕರ್ನಾಟಕದ ವಿಮಾನ ನಿಲ್ದಾಣ ಯೋಜನೆಯೊಂದು 6 ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. 1966ರಲ್ಲಿ ಆರಂಭವಾದ ಯೋಜನೆ ಯಾವಾಗ ಪೂರ್ಣವಾಗಲಿದೆ? ಎಂದು ಮೂಲಸೌಕರ್ಯ ಖಾತೆ ಸಚಿವ ಎಂ.ಬಿ.ಪಾಟೀಲ್ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೂ ಸಹ ಮಾಹಿತಿ ನೀಡಿಲ್ಲ. ಹಾಸನ ನಗರದಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ಬೂವನಹಳ್ಳಿ ಗ್ರಾಮದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ.

    Advertisement

    ಬೆಂಗಳೂರು ನಗರದಿಂದ ಸುಮಾರು 190 ಕಿ.ಮೀ.ದೂರದಲ್ಲಿರುವ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ 6 ದಶಕಗಳ ಇತಿಹಾಸವನ್ನು ಹೊಂದಿದೆ. 1966ರಲ್ಲಿ ಭೂಸ್ವಾಧೀನ ಆರಂಭವಾಗಿತ್ತು, 2021ರಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಪ್ರಗತಿಯನ್ನು ಕಾಣುತ್ತಿಲ್ಲ.

    2024-25ರಲ್ಲಿ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ 2023ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಹಾಸನ ಶಾಸಕ ಸ್ವರೂಪ್ ಪ್ರಕಾಶ್‌ ಅವರ ಪ್ರಶ್ನೆಗೆ ಉತ್ತರ ನೀಡಿದ್ದರು. 193.65 ಕೋಟಿ ರೂ. ವೆಚ್ಚದ ಯೋಜನೆಗ ಸರ್ಕಾರ 164.47 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

    ಕಳೆದ ಶುಕ್ರವಾರ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಬೆಳಗಾವಿ ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಸಚಿವ ಎಂ.ಬಿ.ಪಾಟೀಲ್ ಎರಡು ವರ್ಷದ ಹಿಂದೆ ನೀಡಿದ್ದ ಉತ್ತರದ ಮಾದರಿಯ ಉತ್ತರವನ್ನು ನೀಡಿದ್ದಾರೆ. ಆದರೆ ಯಾವಾಗ ಏರ್‌ಪೋರ್ಟ್ ಕಾರ್ಯಾರಂಭ ಮಾಡಲಿದೆ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕಳೆದ ಎರಡು ವರ್ಷದಲ್ಲಿ ಹಾಸನ ವಿಮಾನ ನಿಲ್ದಾಣ ಯೋಜನೆಗೆ 5 ಕೋಟಿ ರೂ. ವೆಚ್ಚವಾಗಿದೆ ಎಂದು ಸಚಿವರು ಹೇಳಿದ್ದಾರೆ.

    ಹಾಸನ ವಿಮಾನ ನಿಲ್ದಾಣ ಯೋಜನೆ: 1960ರಲ್ಲಿ ಮೊದಲ ಬಾರಿಗೆ ಹಾಸನ ವಿಮಾನ ನಿಲ್ದಾಣ ಯೋಜನೆಯ ಪ್ರಸ್ತಾವನೆ ಸಿದ್ಧಪಡಿಸಲಾಯಿತು. ಹಾಸನದ ಎಸಿ 31 ಎಕರೆ 31 ಗುಂಟೆ ಖಾಸಗಿ ಜಾಗ ಮತ್ತು 58 ಎಕರೆ ಸರ್ಕಾರಿ ಭೂಮಿಯನ್ನು ಯೋಜನೆಗೆ ಸ್ವಾಧೀನ ಮಾಡಿಕೊಂಡರು.

    1966ರ ನವೆಂಬರ್‌ನಲ್ಲಿ ಪುನಃ 12 ಎಕರೆ ಖಾಸಗಿ ಜಾಗ ಮತ್ತು 1971ರಲ್ಲಿ 42 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಯಿತು. 2007ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಂಕುಸ್ಥಾಪನೆ ಮಾಡಿದರು. ಸರ್ಕಾರ ಜ್ಯುಪಿಟರ್ ಏವಿಯೇಷನ್ ಸರ್ವೀಸ್ ಪ್ರೈವೇಟ್ ಲಿ. ಜೊತೆ ಹಾಸನ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಒಪ್ಪಂದಕ್ಕೆ ಸಹಿ ಹಾಕಿತು.

    ಇದೇ ಸಮಯದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವನ್ನು ಪ್ರಾರಂಭಿಸಲಾಯಿತು. 2023ರಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಿದೆ. ಆದರೆ 2025ರ ಅಂತ್ಯಕ್ಕೆ ಸಹ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿಲ್ಲ, ಯಾವಾಗ ಪೂರ್ಣ ಎಂಬ ಮಾಹಿತಿಯೂ ಸದ್ಯಕ್ಕೆ ಇಲ್ಲ.

    ಹಾಸನ ಏರ್‌ಪೋರ್ಟ್‌ ಜೊತೆಗೆ ಗಾಲ್ಫ್‌ ಕೋರ್ಸ್, ಹೋಟೆಲ್ ಸೇರಿ ಇತರ ಮೂಲ ಸೌಕರ್ಯ ಕಾಮಗಾರಿಯನ್ನು ಒಟ್ಟಿಗೆ ಮಾಡಬೇಕು ಎಂದು ಸರ್ಕಾರ ಹೇಳಿತು. ಆದರೆ ಟೆಂಡರ್ ಪಡೆದ ಕಂಪನಿ 960 ಎಕರೆ ಪೂರ್ಣ ಭೂಮಿಯನ್ನು ಹಸ್ತಾಂತರ ಮಾಡಿದರೆ ಮಾತ್ರ ಒಟ್ಟಿಗೆ ಕಾಮಗಾರಿ ಮಾಡುತ್ತೇವೆ ಎಂದು ಹೇಳಿತು.

    2018ರಲ್ಲಿ ಪುನ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಾಣದೇ ಜ್ಯುಪಿಟರ್ ಏವಿಯೇಷನ್ ಸರ್ವೀಸ್ ಪ್ರೈವೇಟ್ ಲಿ. ಜೊತೆಗಿನ ಒಪ್ಪಂದ ರದ್ದುಗೊಳಿಸಲಾಯಿತು. 2021ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಮಾನ ನಿಲ್ದಾಣ ಯೋಜನೆಗೆ 175 ಕೋಟಿ ಅನುದಾನ ಘೋಷಣೆ ಮಾಡಿದರು.

    ವಿಮಾನ ನಿಲ್ದಾಣ ಯೋಜನೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಗೆ ನೀಡಲಾಯಿತು. ತೀರ್ಥಹಳ್ಳಿಯ ಗುತ್ತಿಗೆದಾರ ಇಬ್ರಾಹಿಂ ಷರೀಫ್‌ ಅವರಿಗೆ ಯೋಜನೆ ಕಾಮಗಾರಿ ಟೆಂಡರ್ ನೀಡಲಾಯಿತು.

    ರನ್ ವೇ, ಟ್ಯಾಕ್ಸಿ ಸ್ಟಾಂಡ್, ಪ್ಯಾಸೆಂಜರ್ ಟರ್ಮಿನಲ್, ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ. ಆದರೆ ಕಾಮಗಾರಿಗೆ ಕೊಟ್ಟಿರುವ ಗಡುವು ಏನು?, ವಿಮಾನ ನಿಲ್ದಾಣ ಯಾವಾಗ ಲೋಕಾರ್ಪಣೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading