ಪೊಲೀಸ್ ಇಲಾಖೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗೃಹ ಸಚಿವರು ಗುಡ್‌ನ್ಯೂಸ್ ನೀಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕಲಾಪದಲ್ಲಿ ಗೃಹ ಇಲಾಖೆ ನೇಮಕಾತಿ ಕುರಿತು ಡಾ.ಜಿ.ಪರಮೇಶ್ವರ ಮಾತನಾಡಿದರು.
ವಿಧಾನಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಖಾಲಿ ಇರುವ 1,600 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಹಿಂದಿನ ಸರ್ಕಾರದಲ್ಲಿ 545 ಪಿ.ಎಸ್.ಐ ನೇಮಕಾತಿ ವಿಚಾರದಲ್ಲಿ ಗೊಂದಲ ಉಂಟಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಸದ್ಯ ಸರ್ಕಾರ 947 ಪಿ.ಎಸ್.ಐ ಹುದ್ದೆಗಳನ್ನು ಭರ್ತಿ ಮಾಡಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
ತರಬೇತಿ ಪೂರ್ಣಗೊಂಡ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ 42 ಪಿ.ಎಸ್.ಐ ಹುದ್ದೆಗಳ ಪೈಕಿ 32 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 33 ಪೊಲೀಸ್ ಠಾಣೆಗಳಿದ್ದು, 1,549 ಹುದ್ದೆಗಳಲ್ಲಿ 1,394 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
155 ಹುದ್ದೆಗಳು ಖಾಲಿಯಿವೆ. ಪೊಲೀಸ್ ಠಾಣೆಗಳ ದಿನನಿತ್ಯದ ಕರ್ತವ್ಯಕ್ಕೆ ತೊಂದರೆಯಾಗದಂತೆ 103 ಗೃಹ ರಕ್ಷಕ ಸಿಬ್ಬಂದಿ ನೇಮಿಸಿಕೊಂಡು ಕರ್ತವ್ಯ ಭಾರವನ್ನು ಸರಿದೂಗಿಸಲಾಗಿದೆ ಎಂದು ಸಚಿವರು ವಿವರಣೆ ನೀಡಿದರು.
ಮುಂಬರುವ ದಿನಗಳಲ್ಲಿ ಮಾನದಂಡಗಳನ್ನು ಆಧರಿಸಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರೇಟ್ ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಾಪಾಡಲು ಸ್ಪೆಷಲ್ ಆಕ್ಷನ್ ಪೋರ್ಸ್ ಶಿವಮೊಗ್ಗದಲ್ಲಿ ನಿಯೋಜಿಸಲಾಗಿದೆ ಎಂದು ಉತ್ತರಿಸಿದರು.
ಆರ್ಥಿಕ ಇಲಾಖೆ ಒಪ್ಪಿಗೆ ಅಗತ್ಯ: ಕಳೆದ ವಾರ ವಿಧಾನ ಪರಿಷತ್‌ನಲ್ಲಿ ಮಾತನಾಡಿದ್ದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ನಿಯಮ 42ರಲ್ಲಿ ರಾಜ್ಯದ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡುವಂತಹ ವಿಶೇಷವಾಗಿ ಯಾವುದೇ ಹುದ್ದೆಯನ್ನು ಸಾರ್ವಜನಿಕ ಹುದ್ದೆಗೆ ಸೇರಿಸುವ ಅಥವಾ ಸಾರ್ವಜನಿಕ ಸೇವೆಯಿಂದ ರದ್ದುಪಡಿಸುವ ಅಥವಾ ಯಾವುದೇ ಹುದ್ದೆಯ ಅವಧಿಯನ್ನು ಅಥವಾ ಉಪಲಬ್ದಗಳನ್ನು ವ್ಯತ್ಯಾಸ ಮಾಡುವ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆಯಲು ತಿಳಿಸಲಾಗಿರುತ್ತದೆ ಎಂದು ಹೇಳಿದ್ದರು.
ಆದ್ದರಿಂದ ಹುದ್ದೆಗಳ ಸೃಜನ ಅಥವಾ ಹುದ್ದೆಗಳ ಸಂಖ್ಯೆಯನ್ನು ಒಳಗೊಂಡ ಪ್ರಸ್ತಾವನೆ, ಯೋಜನೆಗಳ ಕುರಿತು ಆದೇಶಗಳನ್ನು ಹೊರಡಿಸುವ ಪೂರ್ವದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದ್ದರು.
ಆರ್ಥಿಕ ಇಲಾಖೆಯ ಪೂರ್ವಾನುಮತಿಯನ್ನು ಪಡೆಯದೇ ಆಡಳಿತ ಇಲಾಖೆಗಳು ಹುದ್ದೆಗಳನ್ನು ಭರ್ತಿ ಮಾಡಿಕೊಂಡಲ್ಲಿ ಈ ಹುದ್ದೆಗಳಿಗೆ ನೀಡಬೇಕಾದ ವೇತನಕ್ಕಾಗಿ ಆಯವ್ಯಯದಲ್ಲಿ ಸೂಕ್ತ ಅನುದಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಆರ್ಥಿಕ ಇಲಾಖೆಯು ಅಗತ್ಯತೆಗೆ ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಹಮತಿಸುತ್ತದೆ ಎಂದು ತಿಳಿಸಿದ್ದರು.
ಜೊತೆಗೆ, ಕೆಲವು ಇಲಾಖೆಗಳ ಕಾರ್ಯವೈಖರಿ ಅಥವಾ ಕಾರ್ಯ ಪದ್ಧತಿಗಳಲ್ಲಿ ಬದಲಾವಣೆ ಉಂಟಾದಾಗ, ಸಿಬ್ಬಂದಿಯ ಅವಶ್ಯಕತೆ ಹಾಗೂ ಸಂಖ್ಯೆಯ ಬಗ್ಗೆ ಪರಾಮರ್ಶಿಸಬೇಕಾಗುತ್ತದೆ. ಈ ಕಾರ್ಯಗಳನ್ನು ಆರ್ಥಿಕ ಇಲಾಖೆ ನಿರ್ವಹಿಸುತ್ತದೆ. ಒಂದು ವೇಳೆ ಆಡಳಿತ ಇಲಾಖೆಗಳು ಆರ್ಥಿಕ ಇಲಾಖೆಯ ಸಹಮತಿಯನ್ನು ಪಡೆಯದೇ ತಮ್ಮ ಹಂತದಲ್ಲಿಯೇ ಹುದ್ದೆಗಳನ್ನು ಭರ್ತಿ ಮಾಡಿಕೊಂಡಲ್ಲಿ ಆಯವ್ಯಯದಲ್ಲಿ ಸೂಕ್ತ ಅನುದಾನದ ಕೊರತೆ ಉಂಟಾಗಿ ಸಿಬ್ಬಂದಿಯ ವೇತನ ಪಾವತಿಗೆ ತೊಂದರೆಯಾಗುತ್ತದೆ ಎಂದು ವಿವರಣೆ ನೀಡಿದ್ದರು.
ಆರ್ಥಿಕ ಇಲಾಖೆಯ ಅನುಮತಿ ಪಡೆದು ಸೇವೆ ಪಡೆದ ಇಲಾಖೆಗಳ ಸಿಬ್ಬಂದಿಯ ವೇತನ ಪಾವತಿಸಲು ಆಯವ್ಯಯದಲ್ಲಿ ಅಗತ್ಯ ಅನುದಾನ ಕಲ್ಪಿಸಲಾಗುತ್ತದೆ. ಆದುದರಿಂದ ವೇತನ ಪಾವತಿಗೆ ತೊಂದರೆ ಹಾಗೂ ವಿಳಂಬ ಆಗುವುದಿಲ್ಲ. ಆರ್ಥಿಕ ಇಲಾಖೆಯಿಂದ ಅನುಮೋದಿಸಲ್ಪಟ್ಟ ಹುದ್ದೆಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳೆಂದು ಗುರುತಿಸಿದ ಹುದ್ದೆಗಳ ನೇಮಕಾತಿಯನ್ನು ಆಡಳಿತ ಇಲಾಖೆಗಳ ಹಂತದಲ್ಲಿಯೇ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಇಲಾಖಾ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಸ್ಪಷ್ಟಪಡಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


