ಪ್ರಸ್ತುತ ಯುಎಇಯಲ್ಲಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025 ಟೂರ್ನಿ ನಡೆಯುತ್ತಿದ್ದು, ಗ್ರೂಪ್ ಹಂತದ 6ನೇ ಪಂದ್ಯದಲ್ಲಿ ಭಾರತ ಎ ಹಾಗೂ ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗಿದ್ದವು.
ನಿನ್ನೆ ( ನವೆಂಬರ್ 16 ) ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ಓವರ್‌ಗಳಲ್ಲಿ 136 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಪಾಕ್‌ಗೆ 137 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಕೇವಲ 13.2 ಓವರ್‌ಗಳಲ್ಲಿ ಬೆನ್ನಟ್ಟಿದ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು.
ಇನ್ನು ಪಾಕಿಸ್ತಾನ ಚೇಸ್ ಮಾಡುವ ಸಂದರ್ಭದಲ್ಲಿ ಸುಯಶ್ ಶರ್ಮಾ ಎಸೆದ ಹತ್ತನೇ ಓವರ್‌ನ ಮೊದಲ ಎಸೆತಕ್ಕೆ ಪಾಕ್ ಆಟಗಾರ ಸದಾಖತ್ ಸಿಕ್ಸರ್ ಬಾರಿಸುವ ಯತ್ನ ನಡೆಸಿದರು. ಆದರೆ ಬೌಂಡರಿ ಲೈನ್‌ನಲ್ಲಿ ನೇಹಲ್ ವಧೇರಾ ಕ್ಯಾಚ್ ಪಡೆದು ಬೌಂಡರಿಗೆ ಕಾಲಿಡುವ ಮುನ್ನವೇ ಚೆಂಡನ್ನು ಮತ್ತೋರ್ವ ಫೀಲ್ಡರ್ ನಮನ್ ಧೀರ್‌ರತ್ತ ಎಸೆದರು.
ನಮನ್ ಧೀರ್ ಸಹ ಯಾವುದೇ ತಪ್ಪು ಮಾಡದೇ ಚೆಂಡನ್ನು ಪಡೆದರು. ಈ ಕ್ಯಾಚ್ ಪಡೆಯುತ್ತಿದ್ದಂತೆ ಭಾರತೀಯರು ಸಂಭ್ರಮಿಸಿದರು ಹಾಗೂ ಬ್ಯಾಟ್ಸ್‌ಮನ್ ಪೆವಲಿಯನ್‌ನತ್ತ ಹೆಜ್ಜೆ ಹಾಕಲಾರಂಭಿಸಿದರು. ಆದರೆ ಅಂಪೈರ್ ಇದ್ದಕ್ಕಿಂದ್ದಂತೆ ನಾಟ್‌ಔಟ್ ನೀಡಿ ಬ್ಯಾಟ್ಸ್‌ಮನ್‌ನನ್ನು ವಾಪಸ್ ಕರೆದರು. ಇದಕ್ಕೆ ಭಾರತದ ಆಟಗಾರರು ಅಂಪೈರ್ ಜತೆ ಚರ್ಚೆಗಿಳಿದರು ಹಾಗೂ ಔಟ್ ಎಂದು ವಾದಿಸಿದರು.
ಆದರೆ ಐಸಿಸಿಯ ಹೊಸ ನಿಯಮದ ಪ್ರಕಾರ ಇದು ನಾಟ್‌ಔಟ್. ಹೌದು, ಐಸಿಸಿಯ ಹೊಸ ನಿಯಮದ ಪ್ರಕಾರ ಬೌಂಡರಿ ಲೈನ್ ಬಳಿ ಚೆಂಡನ್ನು ಕ್ಯಾಚ್ ಪಡೆಯುವ ಎಸೆಯುವ ಫೀಲ್ಡರ್ ಆ ಚೆಂಡು ಮತ್ತೋರ್ವ ಫೀಲ್ಡರ್ ಕೈ ಸೇರುವ ಮುನ್ನವೇ ಬೌಂಡರಿ ಲೈನ್‌ನಿಂದೊಳಗೆ ಅಂದರೆ ಗ್ರೌಂಡ್‌ಗೆ ಬಂದಿರಬೇಕು, ಇಲ್ಲದಿದ್ದರೆ ಅದನ್ನು ನಾಟ್‌ಔಟ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯೂ ಸಹ ನೇಹಲ್ ವಧೇರಾ ಕ್ಯಾಚ್ ಪಡೆದು ಎಸೆದಿದ್ದಾರೆ, ಆದರೆ ನಮನ್ ಧೀರ್ ಕ್ಯಾಚ್ ಪಡೆದ ಬಳಿಕ ಬೌಂಡರಿಯಿಂದ ಮೈದಾನಕ್ಕೆ ಮರಳಿದ್ದಾರೆ. ಹೀಗಾಗಿ ಇದನ್ನು ನಾಟ್‌ಔಟ್ ಎಂದು ಪರಿಗಣಿಸಲಾಗಿದೆ.
ಇನ್ನು ಈ ಎಸೆತದಲ್ಲಿ ಸಿಕ್ಸ್ ಎಂದೂ ಸಹ ತೀರ್ಪನ್ನು ನೀಡಲಾಗುವುದಿಲ್ಲ. ಅದನ್ನು ಡಾಟ್‌ಬಾಲ್ ಎಂದೇ ಪರಿಗಣಿಸಲಾಗುತ್ತದೆ. ನಿನ್ನೆಯ ಪಂದ್ಯದಲ್ಲೂ ಸಹ ಆ ಎಸೆತಕ್ಕೆ ಯಾವುದೇ ರನ್ ನೀಡಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


