ಬೆಳಗಾವಿ: ಗ್ಯಾರಂಟಿ ಯೋಜನೆಗಳ ಮೇಲೆ ನಿಮಗೆ ಅಷ್ಟು ವಿಶ್ವಾಸವಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಬಿಜೆಪಿ ಶಾಸಕರು ಆಡಳಿತಾರೂಢ ಕಾಂಗ್ರೆಸ್‌ಗೆ ಸವಾಲು ಹಾಕಿದರು.
ಸರ್ಕಾರ ದಿವಾಳಿಯಾಗಿರುವುದರಿಂದ ಗ್ಯಾರಂಟಿ ಯೋಜನೆಗಳನ್ನು ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿ ಎಂದು ಬಿಜೆಪಿಯ ಸುನೀಲ್ ಕುಮಾರ್ ಹೇಳಿದಾಗ ಮಧ್ಯ ಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷಿ ಹೆಬ್ಬಾಳ್ಕರ್ ಉತ್ತರ ನೀಡುವಾಗ ನಾನು ಇಲ್ಲಿದ್ದೇ. ಪಾವತಿಯಾದ ಕಂತಿನ ಆಧಾರದ ಮೇಲೆ ಸಚಿವರು ಉತ್ತರ ನೀಡಿದ್ದಾರೆ. ಎರಡು ತಿಂಗಳ ವ್ಯತ್ಯಾಸವಾಗಿರುವುದು ಸರ್ಕಾರ ಗಮನಕ್ಕೆ ಬಂದಿದೆ.
ಸರ್ಕಾರಕ್ಕೆ ದಿವಾಳಿಯಾಗಿದೆ ಎಂದು ಬಿಜೆಪಿಯವರು ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5400 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ. ಜಲಜೀವನ್ ಮಿಷನ್ ಮತ್ತು ಉದ್ಯೋಗ ಖಾತ್ರಿ ಯೋಜನೆ ಅಡಿ ಸಾವಿರಾರು ಕೋಟಿ ರೂಪಾಯಿ ರಾಜಕ್ಕೆ ಬಾಕಿ ಉಳಿದಿದೆ. ಅಂದ ಮಾತ್ರಕ್ಕೆ ಕೇಂದ್ರ ಸರಕಾರವೂ ದಿವಾಳಿಯಾಗಿದೆ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಪೂರ್ಣವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ನಮ ಯೋಜನೆಗಳನ್ನೇ ಬಿಜೆಪಿ ನಕಲು ಮಾಡಿ ಚುನಾವಣೆ ಗೆಲ್ಲುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇದಕ್ಕೆ ತಿರುಗೇಟು ನೀಡಿದ ಬಿಜೆಪಿಯ ಸದಸ್ಯರು ನಿಮಗೆ ಗ್ಯಾರಂಟಿ ಯೋಜನೆ ಮೇಲೆ ಅಷ್ಟ ವಿಶ್ವಾಸ ಇದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದರು.
ಸಚಿವ ಪ್ರಿಯಾಂಕ ಖರ್ಗೆ, ಮತಗಳ್ಳತನ ಮಾಡಿ ಗೆಲ್ಲುತಿರುವ ಬಿಜೆಪಿ ಒಂದು ಮತವನ್ನು 70 ರೂಪಾಯಿಗಳಿಗೆ ಖರೀದಿ ಮಾಡುತ್ತಿದೆ. ನಮಗೆ ಚುನಾವಣೆಗೆ ಬರಲು ಸವಾಲು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಮತ್ತೊಂದು ಸುತ್ತಿನ ಗದ್ದಲಕ್ಕೆ ಕಾರಣವಾಯಿತು.
ಚುನಾವಣೆಯ ವಿಚಾರಕ್ಕೆ ಗಲಾಟೆಯಾದಾಗ ಸಭಾಧ್ಯಕ್ಷರು ಯಾರಿಗೆಲ್ಲಾ ಚುನಾವಣೆ ಬೇಕು, ಅಂತಹವರು ಕೈ ಮೇಲೆತ್ತಿ, ನನ್ನ ಕೈಗೆ ನಿಮ ರಾಜೀನಾಮೆ ಕೊಡಿ, ಅದನ್ನು ನಾನು ಸ್ವೀಕಾರ ಮಾಡಿ ರಾಜ್ಯಪಾಲರಿಗೆ ಕಳುಹಿಸುತ್ತೇನೆ. ಮರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬನ್ನಿ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಸಭಾಧ್ಯಕ್ಷರು ಎತ್ತರದ ಸ್ಥಾನದಲ್ಲಿದ್ದಾರೆ. ಸಭಾಧ್ಯಕ್ಷರು ಹೇಳಿದ ಮಾತನ್ನು ನಾವು ಕೇಳುತ್ತೇವೆ. ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸಭಾಧ್ಯಕ್ಷರಿಗಿಂತಲೂ ಎತ್ತರದ ಪೀಠವನ್ನು ಹಾಕಿ ಕೊಡಿ ಎಂದು ಬಿಜೆಪಿಯ ಸಿ.ಸಿ.ಪಾಟೀಲ್ ಹೇಳಿದಾಗ, ನೀವು ಹೇಳಿದ್ದನ್ನೆಲ್ಲ ಕೇಳಿಕೊಂಡು ಕೂರಲು ನಾನು ಬಂದಿಲ್ಲ ಎಂದು ಪ್ರಿಯಾಂಕ್‌ಖರ್ಗೆ ತಿರುಗೇಟು ನೀಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


