ಮೈಸೂರು: ಮುಡಾ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ತನಿಖೆ ನಡೆಸಿ, ಕೋಟ್ಯಾಂತರ ರೂ.ಗಳಷ್ಟು ಹಗರಣ ನಡೆದಿದೆ ಎಂದು ವರದಿ ನೀಡಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಡಿ ಅಧಿಕಾರಿಗಳು ಮುಡಾ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಿಎಂ ತವರು ಜಿಲ್ಲೆಯ ಮುಡಾ ಕಚೇರಿಯಲ್ಲಿ ಹಗರಣ ನಡೆದಿದೆ ಎಂಬ ವಿಚಾರವನ್ನು ವರದಿ ಮಾಡಿದ್ದಾರೆ. ಅಲ್ಲದೇ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರಿನ ತಳಕು ಹಾಕಿಕೊಂಡ ಮೊದಲ ದಿನದಿಂದಲೂ ನಮ್ಮ ಪಕ್ಷದವರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮುಡಾ ಹಗರಣದಲ್ಲಿ ಸದ್ಯಕ್ಕೆ ವಿಚಾರಣೆ ಮುಗಿಯುವುದಿಲ್ಲ. ಮುಡಾದಿಂದ ಪಡೆದಿದ್ದ ನಿವೇಶನಗಳನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯೇ ಮುಡಾ ಕಚೇರಿಗೆ ಹಿಂತಿರುಗಿಸಿದ್ದಾರೆ. ಇನ್ನೂ ಇಡಿ ತನಿಖೆಯಲ್ಲಿ ಮುಡಾದಲ್ಲಾದ ಕೋಟ್ಯಾಂತರ ರೂಪಾಯಿಯ ಹಗರಣ ಬೆಳಕಿಗೆ ಬಂದಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಈ ತನಿಖೆಯಲ್ಲಿ ಸಿದ್ದರಾಮಯ್ಯನವರು ತಪ್ಪಿಸ್ಥರಲ್ಲ ಎಂದರೆ ಮತ್ತೊಮ್ಮೆ ಸಿಎಂ ಅಧಿಕಾರವನ್ನು ವಹಿಸಿಕೊಂಡು ಮುಂದುವರೆಯಬೇಕು. ಆದಾಗ್ಯೂ ಸದ್ಯಕ್ಕೆ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಅಗತ್ಯ ಕ್ರಮ ಕೈಗೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವರೆಗೂ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


