ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಜನ ಸಾಗರವೇ ಹರಿದುಬರುತ್ತಿದ್ದು, ಪ್ರಯಾಗ್‌ರಾಜ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳೂ ಸಹ ವಾಹನದಟ್ಟಣೆಯಿಂದ ಮುಚ್ಚಿಹೋಗಿವೆ. ಪ್ರಯಾಗ್‌ರಾಜ್ ಇನ್ನೂ 50 ಕಿಲೋಮೀಟರ್ ಇರುವಾಗಲೇ ಟ್ರಾಫಿಕ್ ಜಾಮ್ ಬಿಸಿ ತಟ್ಟುತ್ತಿದ್ದು, ಈ ಕುರಿತ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹೀಗಿರುವಾಗ ಟ್ರಾಫಿಕ್‌ನಿಂದ ಪಾರಾಗಲು ಬಿಹಾರದ ಏಳು ಜನರ ಯುವಕರ ಗುಂಪೊಂದು ಮಹಾ ಸಾಹಸ ಮಾಡಿದ್ದು, ಬೃಹತ್ ಗಂಗಾ ನದಿಯಲ್ಲಿ ಬರೋಬ್ಬರಿ 275 ಕಿಲೋಮೀಟರ್ ಬೋಟ್ ಮುಖಾಂತರ ಸಾಗಿ ಪ್ರಯಾಗ್‌ರಾಜ್ ತಲುಪಿದ್ದಾರೆ. ಅಲ್ಲದೇ ಅದೇ ಮಾರ್ಗದಲ್ಲಿ ತಮ್ಮ ಊರಿಗೂ ಸಹ ವಾಪಸ್ ಬಂದಿದ್ದಾರೆ. ಹೌದು, ಬಿಹಾರದ ಬುಕ್ಸರ್ ಜಿಲ್ಲೆಯ ಏಳು ಮಂದಿ ಈ ಸಾಹವನ್ನು ಮಾಡಿದ್ದಾರೆ.
ನುರಿತ ಬೋಟ್ ಚಾಲಕ ಮನು ಚೌಧರಿ ಸೇರಿದಂತೆ ಸುಮಂತ್, ಸಂದೀಪ್, ಸುಖ್‌ದೇವ್, ಆಡು, ರವೀಂದ್ರ ಹಾಗೂ ರಮೇಶ್ ದೋಣಿಯಲ್ಲಿ ಕುಂಭಮೇಳ ತಲುಪಿದವರಾಗಿದ್ದಾರೆ. ಬೋಟ್ ಚಾಲಕ ಮನು ಪ್ರತಿದಿನ ಪ್ರಯಾಣಿಕರನ್ನು ಗಂಗಾ ನದಿ ದಾಟಿಸುವ ಅನುಭವ ಹೊಂದಿದ್ದು, ಅದೇ ಮಾರ್ಗವನ್ನು ಅನುಸರಿಸಿ ಪ್ರಯಾಗ್‌ರಾಜ್ ತಲುಪುವ ಯೋಜನೆ ಹಾಕಿದ್ದ.
ಈ ಪ್ಲಾನ್‌ಗೆ ಉಳದ ಆರು ಜನ ಸ್ನೇಹಿತರು ಕೈ ಜೋಡಿಸಿ ಮರೆಯಲಾಗದ ಪಯಣವೊಂದನ್ನು ಮಾಡಿದ್ದಾರೆ. ಇನ್ನು ಇಲ್ಲಿ ಆಸಕ್ತಿದಾಯಕ ವಿಷಯವೆಂದರೆ ಗೂಗಲ್ ಮ್ಯಾಪ್ ಬಳಸಿ ಗಂಗಾನದಿಯಲ್ಲಿ ಸುರಕ್ಷಿತವಾಗಿ ಸಾಗಿದ್ದಾರೆ. ಅದರಲ್ಲಿಯೂ ರಾತ್ರಿ ವೇಳೆ ಗೂಗಲ್ ಮ್ಯಾಪ್ ಇವರ ಪಯಣಕ್ಕೆ ತುಂಬಾ ಸಹಕಾರಿಯಾಗಿದೆ.
ಹೋಗಿ ಬರಲು 550 ಕಿಲೋಮೀಟರ್ ಕ್ರಮಿಸಬೇಕಾದ ಈ ಪಯಣಕ್ಕೆ ಬೇಕಾದ ಗ್ಯಾಸ್ ಸಿಲಿಂಡರ್, ಸ್ಟೋವ್, ಅಗತ್ಯ ಆಹಾರ ಹಾಗೂ ಸುರಕ್ಷತೆಗಾಗಿ ಹೆಚ್ಚುವರಿ ಬೋಟ್ ಎಂಜಿನ್‌ಗಳನ್ನು ಇವರು ತಮ್ಮೊಡನೆ ಕೊಂಡೊಯ್ದಿದ್ದರು. ಫೆಬ್ರವರಿ 11ರಂದು ತಮ್ಮ ಊರಿಂದ ಹೊರಟ ಇವರು ಫೆಬ್ರವರಿ 13ರಂದು ಪ್ರಯಾಗ್‌ರಾಜ್‌ನಿಂದ ವಾಪಸ್ಸಾಗಿದ್ದಾರೆ.
ಹೀಗೆ ನದಿ ಮಾರ್ಗದಲ್ಲಿ ಸಾಗಿ ಕುಂಭಮೇಳದಲ್ಲಿ ಪವಿತ್ರ ಸ್ನಾನವನ್ನೂ ಸಹ ಮಾಡಿ ವಾಪಸ್ ಮನೆ ಸೇರಿರುವ ಇವರಿಗೆ ತಲುಗಿದ ವೆಚ್ಚ 2000 ರೂಪಾಯಿ. ಅದೂ ಸಹ ಪೆಟ್ರೋಲ್ ವೆಚ್ಚವೂ ಸೇರಿದಂತೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


