2025ರಲ್ಲೂ ಜಾತೀಯತೆ, ಮೇಲು ಕೀಳು ತಾರತಮ್ಯ ಅಂತೀರಾ? ಹಾಗೇನೂ ಇಲ್ಲ ಈ ಹಿಂದಿನ ಹಾಗೆ ಈಗಿಲ್ಲ ಎಂದು ಹೇಳುವವರೇ ಹೆಚ್ಚು. ಆದರೆ ಅಸಲಿಯತ್ತಿಗೆ ಜಾತೀಯತೆ ಎಂಬುದು ಮದ್ದೇ ಇಲ್ಲದ ಸೋಂಕು.
ನಿನ್ನೆಯಷ್ಟೇ ಬಹುಜನ ಮಹಿಳೆಯನ್ನು ಪತಿ ಮಾಡಿದ 80 ಸಾವಿರ ರೂ ಸಾಲ ಮರು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದ ಘಟನೆ ಆಂಧ್ರ ಪ್ರದೇಶದ ಕುಪ್ಪಂನಲ್ಲಿ ನಡೆದಿತ್ತು. ಇದೀಗ ಮಾರನೇ ದಿನವೇ ಅದೇ ಆಂಧ್ರ ಪ್ರದೇಶದಲ್ಲಿ ಅಂತಹದ್ದೇ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಜೂನ್ 16ರಂದು ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಅದೋನಿ ಕ್ಷೇತ್ರದ ಶಾಸಕ ಪೊದಲ ವೆಂಕಟ ಪಾರ್ಥಸಾರಥಿ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದರು. ಬಿಜೆಪಿಯ ಶಾಸಕರಾದ ಇವರು ತಮ್ಮ ಮೈತ್ರಿ ಪಕ್ಷ ಟಿಡಿಪಿಯ ಕಾರ್ಯಕರ್ತರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಇದೇ ಸಮಯದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ವೇದಿಕೆ ಮೇಲೆ ಕರೆಯಲು ವೆಂಕಟ ಪಾರ್ಥಸಾರಥಿ ಮುಂದಾದರು.
ಈ ವೇಳೆ ಪಕ್ಕದಲ್ಲೇ ನಿಂತಿದ್ದ ಟಿಡಿಪಿಯ ಮಹಿಳಾ ಕಾರ್ಯಕರ್ತೆಯೊಬ್ಬರು ವೇದಿಕೆ ಬೇಡ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಾಕೆ ಆತ ಕ್ರೈಸ್ತ ಧರ್ಮದವನಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆ ಮಹಿಳೆ ಅಲ್ಲ ಆತ ಎಸ್‌ಸಿ ಎಂದು ಬಾಯಿಗೆ ಕೈ ಅಡ್ಡ ಇಟ್ಟು ಹೇಳಿದ್ದಾಳೆ.
ಹೀಗೆ ಹೇಳುತ್ತಿದ್ದಂತೆ ದಲಿತ ಅಧ್ಯಕ್ಷನನ್ನು ವೇದಿಕೆ ಬಳಿ ಕರೆಸಿ ಕೆಳಗೇ ನಿಲ್ಲಿಸಿ ಮಾತು ಮುಂದುವರಿಸಿದ್ದಾರೆ. ಸದ್ಯ ಈ ಹೀನಾಯ ವಿಡಿಯೊ ಹೊರಬಿದ್ದಿದ್ದು, ಸಂವಿಧಾನದಂತಹ ಪವಿತ್ರ ರಕ್ಷಣೆಯ ನಡುವೆಯೂ ದಲಿತರ ಬದುಕು ಎಷ್ಟು ಶೋಚನೀಯ ಎಂಬುದು ಬಹಿರಂಗವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


