ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಅಕ್ರಮಗಳ ತೆಗೆದು ಹಾಕಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರ ಎಸ್ಐಟಿ ರಚನೆ ಮಾಡಿದೆ.
ಬಿ.ಕೆ.ಸಿಂಗ್ ಐಪಿಎಸ್ ಅಧಿಕಾರಿ, ಅಪರ ಪೊಲೀಸ್ ಮಹಾನಿರ್ದೇಶಕರು, ಸಿಐಡಿ, ಬೆಂಗಳೂರು ಇವರ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖೆ ಭಾಗವಾಗಿ, ಎಸ್ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮತ್ತು ಅವರ ಆಪ್ತರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದ ಸಿಐಡಿಯ ವಿಶೇಷ ತನಿಖಾ ತಂಡ (ಎಸ್ಐಟಿ) ಕಲಬುರಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ :26/2023 ಕಲಂ 182,419,464 465 ಐ.ಪಿ.ಸಿ. ರಂತೆ ದಾಖಲಾಗಿರುವ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಸರ್ಕಾರ ಆದೇಶಿಸಿದೆ.
ಎಸ್ಐಟಿ ದಾಳಿ: 70ಕ್ಕೂ ಅಧಿಕ ಎಸ್ಐಟಿ ಅಧಿಕಾರಿಗಳ ತಂಡ ಕಲಬುರಗಿ ಜಿಲ್ಲೆಯ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿಯನ್ನು ಮಾಡಿದೆ. ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಸುಭಾಷ್ ಗುತ್ತೇದಾರ್ ಪುತ್ರ ಹರ್ಷಾನಂದ ಗುತ್ತೇದಾರ್ ಮತ್ತು ಚಾರ್ಟೆಡ್ ಅಕೌಟೆಂಟ್ ಆಗಿರುವ ಮಲ್ಲಿಕಾರ್ಜುನ ಮಹಾಂತಗೋಳ ನಿವಾಸದ ಮೇಲೆ ದಾಳಿ ನಡೆಸಿ, ಪರಿಶೀಲನೆ ಮಾಡುತ್ತಿದ್ದಾರೆ.
ಎಸ್ಐಟಿ ಎಸ್ಪಿ ಶುಭಾನ್ವಿತಾ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಹರ್ಷಾನಂದ ಗುತ್ತೇದಾರ್ ನಿವಾಸ, ಅನ್ನಪೂರ್ಣ ಕ್ರಾಸ್ ಸಮೀಪದ ಅಪ್ನಾಬಾರ್ ಹಾಗೂ ಖೂಬಾ ಬಡಾವಣೆಯಲ್ಲಿರುವ ಮಲ್ಲಿಕಾರ್ಜುನ ಮಹಾಂತಗೋಳ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ಆಳಂದ ಕ್ಷೇತ್ರದಲ್ಲಿ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಡಿಲೀಟ್ ಮಾಡಿರುವ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕುರಿತು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಚುನಾವಣಾ ಆಯೋಗ ಸಿಐಡಿಗೆ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದರು.
ಈ ಪ್ರಕರಣದ ಗಂಭೀರತೆ ತಿಳಿದ ಕರ್ನಾಟಕ ಸರ್ಕಾರ ಮತದಾರರ ಪಟ್ಟಿಯಲ್ಲಿನ ಹೆಸರು ಡಿಲೀಟ್ ಕುರಿತು ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿತ್ತು. ಈ ತನಿಖೆಯ ಭಾಗವಾಗಿಯೇ ಈಗ ಎಸ್ಐಟಿ ಅಧಿಕಾರಿಗಳ ದಾಳಿ ನಡೆದಿದೆ.
ಆರೋಪವೇನು?; ಕಾಂಗ್ರೆಸ್ ನಾಯಕ ಬಿ.ಆರ್.ಪಾಟೀಲ್ ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದಲ್ಲಿನ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ 6670 ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಚುನಾವಣಾ ಆಯೋಗ ಪರಿಶೀಲಿಸಿದಾಗ ಒಟ್ಟು 6018 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ವಿವಿಧ ಸರ್ಕಾರಿ ಆನ್ಲೈನ್ ಅಪ್ಲಿಕೇಷನ್ಗಳಿಗೆ ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 24 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಪುರಸ್ಕರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದು ಕಂಡು ಬಂದಿತ್ತು.
5994 ಅರ್ಜಿ ಪರಿಶೀಲಿಸಿದಾಗ ಯಾರೋ, ಯಾವುದೋ ದುರುದ್ದೇಶದಿಂದ ವಿವಿಧ ಮೊಬೈಲ್ ಸಂಖ್ಯೆಗಳನ್ನು ಉಪಯೋಗಿಸಿ, ಮೂಲ ಮತದಾರರ ಗಮನಕ್ಕೆ ಬಾರದಂತೆ ಮತ್ತು ಗೊತ್ತಾಗದಂತೆ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲು ಅರ್ಜಿ ಸಲ್ಲಿಸಿರುವುದು ಕಂಡು ಬಂದಿತ್ತು.
ಈ ಬಗ್ಗೆ ಕೆಎಎಎಸ್ ಅಧಿಕಾರಿ ಮಮತಾ ಕುಮಾರಿ ವಿಚಾರಣೆ ಮಾಡಿ ದಿನಾಂಕ 21.02.2023ರಂದು ನೀಡಿದ ದೂರಿನ ಆಧಾರದ ಮೇಲೆ ಕಲ್ಬುರ್ಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 26/2023 ಕಲಂ, 182, 419, 464, 465 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು.
ಆದ್ದರಿಂದ ಕರ್ನಾಟಕ ಸರ್ಕಾರ ಈ ಪ್ರಕರಣ, ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಇತರೆ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡ (Special Investigation Team) ರಚಿಸಿ ಆದೇಶವನ್ನು ಹೊರಡಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


