ಬೆಂಗಳೂರು: ದೇಶದ ಅತಿದೊಡ್ಡ ತಂತ್ರಜ್ಞಾನ ಉತ್ಸವವಾದ 28ನೇ ಆವೃತ್ತಿಯ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ (BTS-2025) ಇಂದಿನಿಂದ ಆರಂಭವಾಗಲಿದೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಈ ಶೃಂಗಸಭೆ ಈ ವರ್ಷ ದೊಡ್ಡ ಬದಲಾವಣೆಯೊಂದಿಗೆ ನಡೆಯುತ್ತಿದೆ.
ಈ ಹಿಂದೆಂದಿಗಿಂತ ದೊಡ್ಡ ಮಟ್ಟದಲ್ಲಿ ಆಯೋಜಿಸಿರುವ ಈ ಬಾರಿಯ ಬಿಟಿಎಸ್ ಅನ್ನು ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ.
ಪ್ರಮುಖ ಥೀಮ್:
FUTURISE;ಈ ಬಾರಿಯ ಧ್ಯೇಯವಾಕ್ಯ “ಫ್ಯೂಚರೈಸ್” (Futurise). ಇದರರ್ಥ ತಿಳಿದಿಲ್ಲದ ಭವಿಷ್ಯವನ್ನು ರೂಪಿಸುವುದು, ಊಹಿಸಲಾಗದ್ದನ್ನು ವಿಸ್ತರಿಸುವುದು ಮತ್ತು ಜಗತ್ತನ್ನು ಮುನ್ನಡೆಸುವುದು. ಕ್ವಾಂಟಮ್ ತಂತ್ರಜ್ಞಾನದಿಂದ ಬಾಹ್ಯಾಕಾಶ ತಂತ್ರಜ್ಞಾನ, ಹೆಲ್ತ್‌ಟೆಕ್‌ನಿಂದ AI ವರೆಗೆ, ಎಲ್ಲವನ್ನೂ ಒಟ್ಟಾಗಿ ‘ಫ್ಯೂಚರೈಸ್’ ಮಾಡುವುದು ಇದರ ಗುರಿ.
ಈ ಶೃಂಗಸಭೆಯು ಕೃತಕ ಬುದ್ಧಿಮತ್ತೆ (AI) ಗೆ ಹೆಚ್ಚು ಮಹತ್ವ ನೀಡುತ್ತಿದೆ.AI ಬ್ರಹ್ಮಾಂಡ, ಸೆಮಿಕಾನ್, ಡಿಜಿ–ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ, ನವೋದ್ಯಮ ಪರಿಸರ, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಒಟ್ಟು 9 ಭಿನ್ನ ಪರಿಕಲ್ಪನೆಗಳ ಅಡಿಯಲ್ಲಿ ಪ್ರದರ್ಶನಗಳು ಮತ್ತು ಗೋಷ್ಠಿಗಳನ್ನು ರೂಪಿಸಲಾಗಿದೆ.AI ಕ್ಷೇತ್ರಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಮಳಿಗೆಗಳು ಇಲ್ಲಿ ಇರಲಿವೆ.
ಸ್ಟಾರ್ಟ್‌ಅಪ್‌ಗಳು (ನವೋದ್ಯಮಗಳು) ತಮ್ಮ ಹೊಸ ಉತ್ಪನ್ನಗಳನ್ನು ಬಿಟಿಎಸ್‌ನಲ್ಲಿಯೇ ಅನಾವರಣ ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.ನವೋದ್ಯಮಗಳು, ಸಂಶೋಧಕರು ಮತ್ತು ಹೂಡಿಕೆದಾರರು ಮುಖಾಮುಖಿಯಾಗಲು ಹಲವು ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ.
ಶೃಂಗಸಭೆಯಲ್ಲಿ ನವೋದ್ಯಮ ಪುರಸ್ಕಾರ, ಸುಸ್ಥಿರ ಮಳಿಗೆ ಪುರಸ್ಕಾರ ಮತ್ತು ಟಿಸಿಎಸ್ ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮಗಳೂ ನಡೆಯಲಿವೆ.ಈ ಬಾರಿಯ ಬಿಟಿಎಸ್, ಕರ್ನಾಟಕವನ್ನು ತಂತ್ರಜ್ಞಾನ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2025 ರ ಪ್ರಮುಖ ಅಂಕಿ-ಅಂಶಗಳು (ಮೂರು ದಿನಗಳಲ್ಲಿ):
ಇಂದು (ನವೆಂಬರ್ 18) ಆರಂಭವಾಗುತ್ತಿರುವ 28ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (BTS-2025) ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಆಯೋಜನೆಯಾಗುತ್ತಿದ್ದು, ಮೂರು ದಿನಗಳಲ್ಲಿ ಪ್ರಮುಖವಾಗಿ 1,200ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಒಳಗೊಂಡಿದೆ.
ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕುರಿತು ಗಹನವಾದ ಚರ್ಚೆಗಳನ್ನು ನಡೆಸಲು 100ಕ್ಕೂ ಹೆಚ್ಚು ತಂತ್ರಜ್ಞಾನ ಗೋಷ್ಠಿಗಳನ್ನು ರೂಪಿಸಲಾಗಿದೆ. ಈ ಜಾಗತಿಕ ವೇದಿಕೆಯಲ್ಲಿ 60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ಒಟ್ಟು 10,000ಕ್ಕೂ ಹೆಚ್ಚು ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಮತ್ತು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಗೆ, ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ವೀಕ್ಷಕರು ಸೇರಿದಂತೆ ಒಟ್ಟು 50,000ಕ್ಕೂ ಹೆಚ್ಚು ಜನರು ಶೃಂಗಸಭೆಗೆ ಭೇಟಿ ನೀಡುವ ನಿರೀಕ್ಷೆ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


