ಭಾರತದಲ್ಲಿ ಮಹಿಳೆಯರನ್ನು ಹೆಚ್ಚು ಕಾಡುತ್ತಿರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ (Cervical Cancer) ಪ್ರಮುಖವಾದುದು. ಇದು ಗರ್ಭಾಶಯದ ಕೆಳಭಾಗವಾದ ಗರ್ಭಕಂಠದಲ್ಲಿ ಉಂಟಾಗುವ ಅಸಹಜ ಜೀವಕೋಶಗಳ ಬೆಳವಣಿಗೆಯಿಂದ ಬರುತ್ತದೆ. ಮುಖ್ಯವಾಗಿ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಸೋಂಕಿನಿಂದ ಈ ಸಮಸ್ಯೆ ಉಂಟಾಗುತ್ತದೆ.
ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಮಹಿಳೆಯರಲ್ಲಿ ಈ ಬಗ್ಗೆ ಇರುವ ಅರಿವಿನ ಕೊರತೆಯಿಂದಾಗಿ ಇದು ಪ್ರಾಣಕ್ಕೆ ಕಂಟಕವಾಗುತ್ತಿದೆ.ಪ್ಯಾಪ್ ಸ್ಮಿಯರ್ (Pap Smear) ಪರೀಕ್ಷೆಯ ಮೂಲಕ ಆರಂಭದಲ್ಲೇ ರೋಗ ಪತ್ತೆ ಹಚ್ಚಬಹುದು.ಎಚ್‌ಪಿವಿ (HPV) ಲಸಿಕೆ ಪಡೆಯುವುದರಿಂದ ಈ ಕ್ಯಾನ್ಸರ್ ಬರದಂತೆ ತಡೆಯಬಹುದು.ಈ ಮಾರಣಾಂತಿಕ ಕಾಯಿಲೆಯನ್ನು ಜಗತ್ತಿನಿಂದ ತೊಡೆದುಹಾಕಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 17 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ಏನಿದು ‘ಗರ್ಭಕಂಠ ಕ್ಯಾನ್ಸರ್’?
ಗರ್ಭಕಂಠವು ಗರ್ಭಾಶಯದ ಕೆಳಗಿನ ಭಾಗವಾಗಿದ್ದು, ಇದು ಯೋನಿಯೊಂದಿಗೆ ಸಂಪರ್ಕ ಹೊಂದಿರುತ್ತದೆ. ಈ ಭಾಗದಲ್ಲಿ ಉಂಟಾಗುವ ತೀವ್ರ ಸ್ವರೂಪದ ಗೆಡ್ಡೆಯನ್ನೇ ಗರ್ಭಕಂಠ ಕ್ಯಾನ್ಸರ್ ಎನ್ನಲಾಗುತ್ತದೆ.30 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಬರುವ ಹೆಚ್ಚಿನ ಅಪಾಯ ಕಂಡುಬರುತ್ತದೆ
ಪತ್ತೆ ಹಚ್ಚುವುದು ಹೇಗೆ? ಭಯ ಬೇಡ, ಪರೀಕ್ಷೆ ಸುಲಭ!
ಗರ್ಭಕಂಠದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಗುಣಪಡಿಸುವುದು ಸುಲಭ. ವೈದ್ಯರು ಈ ಕೆಳಗಿನ ಪ್ರಮುಖ ಪರೀಕ್ಷೆಗಳ ಮೂಲಕ ರೋಗದ ಇರುವಿಕೆಯನ್ನು ಖಚಿತಪಡಿಸಿಕೊಳ್ಳುತ್ತಾರೆ:
ಪ್ಯಾಪ್ ಸ್ಮೀಯರ್ ಟೆಸ್ಟ್ (Pap Smear Test): ಇದು ಅತ್ಯಂತ ಸಾಮಾನ್ಯ ಮತ್ತು ಪರಿಣಾಮಕಾರಿ ಪರೀಕ್ಷೆ. ವೈದ್ಯರು ಗರ್ಭಕಂಠದಿಂದ ಕೆಲವು ಜೀವಕೋಶಗಳನ್ನು (Cells) ಸಂಗ್ರಹಿಸಿ, ಅವುಗಳಲ್ಲಿ ಏನಾದರೂ ಅಸಹಜ ಬದಲಾವಣೆಗಳಿವೆಯೇ ಎಂದು ಲ್ಯಾಬ್‌ನಲ್ಲಿ ಪರೀಕ್ಷಿಸುತ್ತಾರೆ.
ಪೆಲ್ವಿಕ್ ಪರೀಕ್ಷೆ (Pelvic Exam): ಲಕ್ಷಣಗಳು ಕಂಡುಬಂದಾಗ ವೈದ್ಯರು ದೈಹಿಕವಾಗಿ ಗರ್ಭಕೋಶ ಮತ್ತು ಅದರ ಸುತ್ತಮುತ್ತಲಿನ ಅಂಗಗಳನ್ನು ಪರೀಕ್ಷಿಸಿ, ಗಡ್ಡೆ ಅಥವಾ ಇತರ ಅಸಹಜತೆಗಳಿವೆಯೇ ಎಂದು ಪರಿಶೀಲಿಸುತ್ತಾರೆ.
ಬಯಾಪ್ಸಿ (Biopsy): ಒಂದು ವೇಳೆ ಪ್ಯಾಪ್ ಸ್ಮೀಯರ್‌ನಲ್ಲಿ ಕ್ಯಾನ್ಸರ್ ಇರಬಹುದು ಎಂದು ಸಂಶಯ ಬಂದರೆ, ವೈದ್ಯರು ಗರ್ಭಕಂಠದ ಅಂಗಾಂಶದ (Tissue) ಸಣ್ಣ ತುಣುಕನ್ನು ತೆಗೆದುಕೊಂಡು ಆಳವಾದ ಪರೀಕ್ಷೆಗೆ ಒಳಪಡಿಸುತ್ತಾರೆ. ಇದನ್ನೇ ಬಯಾಪ್ಸಿ ಎನ್ನಲಾಗುತ್ತದೆ.
ಈ ಕ್ಯಾನ್ಸರ್ ಬರಲು ಕಾರಣವೇನು?
ಗರ್ಭಕಂಠದ ಕ್ಯಾನ್ಸರ್ ಏಕಾಏಕಿ ಕಾಣಿಸಿಕೊಳ್ಳುವುದಿಲ್ಲ. ನಮ್ಮ ಜೀವನಶೈಲಿ ಮತ್ತು ಕೆಲವು ವೈರಸ್‌ಗಳು ಈ ಕಾಯಿಲೆಗೆ ರತ್ನಗಂಬಳಿ ಹಾಸುತ್ತವೆ. ಮುಖ್ಯವಾಗಿ ಈ ಕೆಳಗಿನ ಕಾರಣಗಳಿಂದಾಗಿ ಈ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ:
ಹೆಚ್.ಪಿ.ವಿ (HPV) ವೈರಸ್ ಅಟ್ಯಾಕ್: ಈಗಾಗಲೇ ತಿಳಿಸಿದಂತೆ, ಹ್ಯೂಮನ್ ಪ್ಯಾಪಿಲೋಮ ವೈರಸ್ ಈ ಕ್ಯಾನ್ಸರ್‌ಗೆ ನಂಬರ್ ಒನ್ ಶತ್ರು. ಈ ಸೋಂಕು ದೀರ್ಘಕಾಲ ದೇಹದಲ್ಲಿದ್ದರೆ ಜೀವಕೋಶಗಳು ಕ್ಯಾನ್ಸರ್ ಆಗಿ ಬದಲಾಗುತ್ತವೆ.
ದುಶ್ಚಟಗಳ ಕೆಟ್ಟ ಪರಿಣಾಮ: ನೀವು ಧೂಮಪಾನ (Smoking) ಅಥವಾ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದೀರಾ? ಹಾಗಿದ್ದರೆ ಎಚ್ಚರ! ಮಾದಕ ವ್ಯಸನಿಗಳಲ್ಲಿ ಈ ಕ್ಯಾನ್ಸರ್ ಬರುವ ಅಪಾಯ ಹತ್ತು ಪಟ್ಟು ಹೆಚ್ಚು ಎಂದು ಸಂಶೋಧನೆಗಳು ಹೇಳುತ್ತವೆ.
ರೋಗ ನಿರೋಧಕ ಶಕ್ತಿ ಕುಸಿತ: ನಮ್ಮ ದೇಹದ ಇಮ್ಯೂನಿಟಿ ಪವರ್ (Immunity) ಕಡಿಮೆಯಾದಾಗ, ವೈರಸ್‌ಗಳ ವಿರುದ್ಧ ಹೋರಾಡುವ ಶಕ್ತಿ ದೇಹಕ್ಕೆ ಇರುವುದಿಲ್ಲ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ದಾರಿಯಾಗುತ್ತದೆ.
ಬೊಜ್ಜಿನ ಸಮಸ್ಯೆ: ಹೌದು, ಅತಿಯಾದ ದೈಹಿಕ ತೂಕ ಅಥವಾ ಬೊಜ್ಜು ಕೂಡ ಈ ಕಾಯಿಲೆಗೆ ಒಂದು ಪರೋಕ್ಷ ಕಾರಣವಾಗಬಲ್ಲದು.
ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು, ಹೆಚ್ಪಿವಿ ತಡೆಗಟ್ಟುವ ಲಸಿಕೆಯನ್ನು ನೀಡಬೇಕು. ಆದಾಗ್ಯೂ, ಲಸಿಕೆ ನಂತರವೂ ನಿಯಮಿತ ಸ್ಕ್ರೀನಿಂಗ್ ಅಗತ್ಯ. ಈ ಕ್ಯಾನ್ಸರ್ ಬಗ್ಗೆ ಮಹಿಳೆಯರು ಜಾಗೃತರಾಗಿರುವುದು ಬಹಳ ಮುಖ್ಯ.
10.91 ಕೋಟಿ ರೂ. ಮೌಲ್ಯದ ರಿಚರ್ಡ್ ಮಿಲ್ಲೆ ಗಡಿಯಾರ ಉಡುಗೊರೆ ನೀಡಿದ ಅನಂತ್ ಅಂಬಾನಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


