ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆ ಭಾರೀ ಚರ್ಚೆಯ ವಿಚಾರ. ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ? ಎನ್ನುವುದು ಸದ್ಯಕ್ಕೆ ಅಂತಿಮವಾಗಿಲ್ಲ. ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣದ ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲು ಟೆಂಡರ್ ಕರೆದಿದೆ.
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆ ಕುರಿತು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವರಾದ ಮುರಳೀಧರ್ ಮೊಹೋಲ್ ಈ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.
ಸಂಸದರು ಬೆಂಗಳೂರು 2ನೇ ವಿಮಾನ ನಿಲ್ದಾಣ ಅಥವಾ ಹೆಚ್‌ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಸಂಚಾರಕ್ಕೆ ಪುನಃ ತೆರೆಯಲು ಕೇಂದ್ರ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಬಂದಿದೆಯೇ?, ಬಂದಿದ್ದರೆ ವಿವರಗಳೇನು? ಎಂದು ಕೇಳಿದ್ದರು.
ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ), ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಥವಾ ಇನ್ನಾವುದೇ ಸಂಸ್ಥೆಯಿಂದ ಯಾವುದೇ ಕಾರ್ಯಸಾಧ್ಯತಾ ಅಧ್ಯಯನ, ಸುರಕ್ಷತಾ ಮೌಲ್ಯಮಾಪನ ಅಥವಾ ಸಂಚಾರ ಅಧ್ಯಯನವನ್ನು ನಡೆಸಲಾಗಿದೆಯೇ?, ಅದರ ವಿವರಗಳು ಏನು? ಎಂದು ಪ್ರಶ್ನಿಸಿದ್ದರು.
ದೂರದ ಮಾನದಂಡ, ಸಂಚಾರ ಮಿತಿ ಮತ್ತು ಒಪ್ಪಂದದ ಷರತ್ತುಗಳನ್ನು ಒಳಗೊಂಡಂತೆ ಬೆಂಗಳೂರು ನಗರದಲ್ಲಿ ಎರಡನೇ ವಿಮಾನ ನಿಲ್ದಾಣ ಯೋಜನೆ ಅನುಮೋದಿಸಲು ಸರ್ಕಾರವು ಅನುಸರಿಸುವ ಪ್ರಕ್ರಿಯೆ ಮತ್ತು ಮಾನದಂಡಗಳೇನು? ಎಂದು ವಿವರ ಕೇಳಿದ್ದರು.
ಹೆಚ್‌ಎಎಲ್ ವಿಮಾನ ನಿಲ್ದಾಣವನ್ನು ಪುನಃ ತೆರೆಯಲು ಅಥವಾ 2ನೇ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಈಗಿರುವ ರಿಯಾಯಿತಿ ಒಪ್ಪಂದದ ಯಾವುದೇ ಮಾರ್ಪಾಡು ಅಗತ್ಯವಿದೆಯೇ ಮತ್ತು ಅದರ ವಿವರಗಳು ಹಾಗೂ ಪರಿಹಾರದ ಮಾಹಿತಿ ನೀಡಿ ಎಂದು ಪ್ರಶ್ನಿಸಿದ್ದರು.
ಸಚಿವರ ಉತ್ತರ: ಸಚಿವರು ತಮ್ಮ ಉತ್ತರದಲ್ಲಿ ಕರ್ನಾಟಕ ಸರ್ಕಾರದ ಮನವಿ ಮೇರೆಗೆ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಮೂರು ಸ್ಥಳಗಳ ಬಗ್ಗೆ ಪೂರ್ವ-ಕಾರ್ಯಸಾಧ್ಯತಾ ಅಧ್ಯಯನಗಳನ್ನು (Pre-feasibility Studies) ನಡೆಸಿದೆ. ಈ ಪೂರ್ವ-ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಇದರ ನಂತರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ನೀತಿಯಡಿಯಲ್ಲಿ ಕರ್ನಾಟಕ ಸರ್ಕಾರದಿಂದ ಅಥವಾ ಯಾವುದೇ ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸುವ ಕಂಪನಿಯಿಂದ ಬೆಂಗಳೂರಿನ ಸಮೀಪ 2ನೇ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಭಾರತ ಸರ್ಕಾರ ಮತ್ತು ಬಿಐಎಎಲ್ ನಡುವಿನ ರಿಯಾಯಿತಿ ಒಪ್ಪಂದದ (Concession Agreement) ಪ್ರಕಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಾರಂಭವಾದ 25 ವರ್ಷಗಳ ತನಕ ಅದರ 150 ಕಿಲೋಮೀಟರ್ ವೈಮಾನಿಕ ವ್ಯಾಪ್ತಿಯೊಳಗೆ ಯಾವುದೇ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವನ್ನು (ಮೈಸೂರು ಮತ್ತು ಹಾಸನವನ್ನು ದೇಶೀಯ ವಿಮಾನ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸುವುದನ್ನು ಹೊರತುಪಡಿಸಿ) ಅಭಿವೃದ್ಧಿಪಡಿಸಲು/ ಸುಧಾರಿಸಲು/ ಮೇಲ್ದರ್ಜೆಗೇರಿಸಲು ಅನುಮತಿಯಿಲ್ಲ ಎಂದು ಸಚಿವರು ಹೇಳಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಅಥವಾ ಅಸ್ತಿತ್ವದಲ್ಲಿರುವ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಸಂಚಾರಕ್ಕೆ ಪುನಃ ತೆರೆಯಲು, ರಿಯಾಯಿತಿ ಒಪ್ಪಂದದ ನಿಬಂಧನೆಗಳ ಪ್ರಕಾರ ಬಿಐಎಎಲ್‌ನಿಂದ ಒಪ್ಪಿಗೆ ಪಡೆಯುವುದು ಅಗತ್ಯವಿರುತ್ತದೆ ಎಂದು ಸಚಿವರು ವಿವರಣೆ ಕೊಟ್ಟಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


