ಕರಾಚಿ: ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ 60 ರನ್‌ಗಳ ಹೀನಾಯ ಸೋಲು ಕಂಡಿದ್ದು, ತವರಿನಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯ ಸೋತ ಮುಖಭಂಗಕ್ಕೊಳಗಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 321 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಪಾಕಿಸ್ತಾನ 47.2 ಓವರ್‌ಗಳಲ್ಲಿ 260 ರನ್‌ಗಳಿಗೆ ಆಲ್‌ಔಟ್ ಆಗಿದೆ.
ನ್ಯೂಜಿಲೆಂಡ್ ಇನ್ನಿಂಗ್ಸ್: ನ್ಯೂಜಿಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಡಿವಾನ್ ಕಾನ್ವೆ 10 ರನ್ ಗಳಿಸಿದರೆ, ವಿಲ್ ಯಂಗ್ 113 ಎಸೆತಗಳಲ್ಲಿ 107 ರನ್ ಗಳಿಸಿದರು. ಇನ್ನುಳಿದಂತೆ ಕೇನ್ ವಿಲಿಯಮ್ಸನ್ 1 ರನ್, ಡೆರಿಲ್ ಮಿಚೆಲ್ 10 ರನ್, ಗ್ಲೆನ್ ಫಿಲಿಪ್ಸ್ 39 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಚಚ್ಚಿದರು. ಮೈಕೆಲ್ ಬ್ರೇಸ್‌ವೆಲ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರೆ, ಟಾಮ್ ಲಾಥಮ್ ಅಜೇಯ 118 ರನ್ ಗಳಿಸಿದರು.
ಕಿವೀಸ್ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕೇವಲ 73 ರನ್‌ಗೆ ಕಳೆದುಕೊಂಡಿದ್ದಾಗ ಜತೆಯಾದ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಶತಕದ ಜತೆಯಾಟವಾಡಿ ತಂಡದ ಕೈ ಹಿಡಿದರು. ಯಂಗ್ ವಿಕೆಟ್ ಬಳಿಕ ಲಾಥಮ್ ಜತೆ ಕೈ ಜೋಡಿಸಿದ ಗ್ಲೆನ್ ಫಿಲಿಪ್ಸ್ ಅಬ್ಬರದ ಪ್ರದರ್ಶನ ನೀಡಿದರು.
ಪಾಕ್ ಪರ ನಸೀಮ್ ಷಾ ಹಾಗೂ ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರೆ, ಅಬ್ರಾರ್ ಅಹ್ಮದ್ ಒಂದ ವಿಕೆಟ್ ಪಡೆದರು.
ಪಾಕ್ ಇನ್ನಿಂಗ್ಸ್: ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ಆಘಾ ಹಾಗೂ ಖುಷ್‌ದಿಲ್ ಷಾ ವೇಗವಾಗಿ ಬ್ಯಾಟ್ ಬೀಸಿ ಯಾರಾದರೂ ಕೈ ಜೋಡಿಸಿದರೆ ಗೆಲ್ಲುವ ಪ್ರಯತ್ನ ಮಾಡಬಹುದು ಎನ್ನುವಂತಹ ಆಟವನ್ನಾಡಿದ್ದು ಬಿಟ್ಟರೆ, ಉಳಿದ ಇನ್ಯಾವುದೇ ಬ್ಯಾಟ್ಸ್‌ಮನ್ ಸಹ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ.
ಪಾಕ್ ಪರ ಸೌದ್ ಶಕೀಲ್ 6, ಬಾಬರ್ ಅಜಮ್ 64, ಮೊಹಮ್ಮದ್ ರಿಜ್ವಾನ್ 3, ಫಖರ್ ಜಮಾನ್ 24, ಸಲ್ಮಾನ್ ಅಘಾ 42 (28), ತಯ್ಯಬ್ ತಾಹೀರ್ 1, ಖುಷ್‌ದಿಲ್ ಷಾ 69 (49), ಶಾಹೀನ್ ಅಫ್ರಿದಿ 14, ಹ್ಯಾರಿಸ್ ರೌಫ್ 19, ನಸೀಮ್ ಶಾ 13 ಹಾಗೂ ಅಬ್ರಾರ್ ಅಹ್ಮದ್ ಯಾವುದೇ ಎಸೆತ ಎದುರಿಸದೇ ಅಜೇಯರಾಗಿ ಉಳಿದರು.
ನ್ಯೂಜಿಲೆಂಡ್ ಪರ ವಿಲಿಯಮ್ ಒರಾಕ್ ಹಾಗೂ ನಾಯಕ ಮಿಚೆಲ್ ಸ್ಯಾಂಟ್ನರ್ ತಲಾ 3 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 2 ವಿಕೆಟ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಹಾಗೂ ನಾಥನ್ ಸ್ಮಿತ್ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


