ಬೆಂಗಳೂರು: ನೆರೆ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎ. ವ್ಯಾಸಂಗ ಮಾಡುತ್ತಿರುವ 102 ವಿದ್ಯಾರ್ಥಿಗಳಿಗೆ ತಲಾ ಇಪ್ಪತೈದು ಸಾವಿರ ರೂ ವಿದ್ಯಾರ್ಥಿವೇತನ ಮಂಜೂರು ಮಾಡಿರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಕಳೆದ 3 ವರ್ಷಗಳಿಂದ ಅನುದಾನ ಕೊರತೆಯಿಂದ ವಿದ್ಯಾರ್ಥಿವೇತನ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು ಎಂದ ಅವರು ಈ ಬಾರಿ ಅನುದಾನದ ಕೊರತೆ ನಡುವೆಯೂ 2024-25ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯಾರ್ಥಿವೇತನ ಮಂಜೂರಾತಿಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ 21 ವಿದ್ಯಾರ್ಥಿಗಳು, ಕಾಸರಗೋಡಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ 27 ವಿದ್ಯಾರ್ಥಿಗಳು, ಮಹಾರಾಷ್ಟ್ರದ ಸೊಲ್ಲಾಪುರದ ಪುಣ್ಯಶ್ಲೋಕ ಅಹಲ್ಯಾದೇವಿ ಹೊಳ್ಳರ ವಿವಿಯ 25 ವಿದ್ಯಾರ್ಥಿಗಳು, ಸೊಲ್ಲಾಪುರದ ಸಿಬಿ ಖೇಡಗಿ ಬಸವೇಶ್ವರ ಮಹಾವಿದ್ಯಾಲಯದ 23 ವಿದ್ಯಾರ್ಥಿಗಳು, ಮುಂಬೈ ವಿವಿಯ ಇಬ್ಬರು, ಕುಪ್ಪಂನ ದ್ರಾವಿಡ ವಿವಿಯ ಮೂರು ವಿದ್ಯಾರ್ಥಿಗಳು ಹಾಗೂ ಚನ್ನೈನ ಮದ್ರಾಸು ವಿವಿಯ ಒಬ್ಬರು ಸೇರಿ 102 ವಿದ್ಯಾರ್ಥಿಗಳಿಗೆ ತಲಾ ರೂ. 25 ಸಾವಿರ ರೂ.ಗಳಂತೆ ಒಟ್ಟು 25.50 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊರರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಈಗಾಗಲೇ ವಿದ್ಯಾರ್ಥಿಗಳ ಕೊರತೆಯಿಂದ ಮಧುರೈನ ಕಾಮರಾಜ ವಿಶ್ವವಿದ್ಯಾಲಯ ಹಾಗೂ ಹೈದರಾಬಾದಿನ ಉಸ್ಮಾನಿಯ ವಿವಿಯ ಕನ್ನಡ ವಿಭಾಗಗಳು ಮುಚ್ಚಲ್ಪಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಳಿದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗದ ಸ್ಥಿತಿಯು ಇದೇ ಹಂತಕ್ಕೆ ತಲುಪಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹದೇಶ್ವರ ಬೆಟ್ಟ ದೇವಾಲಯ ಹುಂಡಿಯಲ್ಲಿ ಕಳೆದ 30 ದಿನಗಳಲ್ಲಿ ಸಂಗ್ರಹವಾಗಿದ್ದೆಷ್ಟು?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


