ಉಡುಪಿ: ಮೂರು ರಾಜ್ಯಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂಗೌಡನನ್ನು ಎನ್‌ಕೌಂಟರ್ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ.
ಈ ವೇಳೆ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂಗೌಡ ಬಲಿಯಾಗಿದ್ದಾನೆ
ಕಳೆದ ಕೆಲ ತಿಂಗಳುಗಳಿಂದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಎನ್‌ಎಫ್ ಕಾರ್ಯಾಚರಣೆಗೆ ಮುಂದಾಗಿತ್ತು.
ಕಳೆದ ಮಧ್ಯರಾತ್ರಿ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಕೂಂಬಿಂಗ್ ಶುರುವಾಗಿದೆ.
ಈ ಕೂಂಬಿಂಗ್‌ನಲ್ಲಿ ವಿಕ್ರಂಗೌಡ ಇದ್ದ ಎನ್ನಲಾಗಿದ್ದು, ಗುಂಡಿನ ದಾಳಿಯಿಂದ ಈತ ಸಾವನ್ನಪ್ಪಿದ್ದಾನೆ.
ಇನ್ನುಳಿದ ನಕ್ಸಲರಿಗಾಗಿ ತೀವ್ರ ಶೋಧಕಾರ್ಯ ಮುಂದುವರಿದಿದ್ದು, ವಿಕ್ರಮ್ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಂಗೌಡನ ಮೂಲ ಉಡುಪಿಯ ಹೆಬ್ರಿ ತಾಲ್ಲೂಕಿನ ಕೂಡ್ಲು ನಾಡ್ವಾಲು ಗ್ರಾಮ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ರಾಜ್ಯದ ಜವಾಬ್ದಾರಿಯನ್ನು ವಿಕ್ರಂ ಗೌಡನ ಹೆಗಲಿಗೆ ವಹಿಸಲಾಗಿತ್ತು.
20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ವಿಕ್ರಂಗೌಡ ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು. ಮೂರು ಬಾರಿ ಕರ್ನಾಟಕದ ಪೊಲೀಸರ ಕೈಯಿಂದ ಪರಾರಿಯಾಗಿದ್ದ.
ಈಗ ಪೊಲೀಸರು ವಿಕ್ರಂಗೌಡನನ್ನು ಎನ್‌ಕೌಂಟರ್ ಮಾಡಿದ್ದು, ಇವನ ಜೊತೆಯಿದ್ದ ಇನ್ನು ಹಲವು ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ ನೀಡಿದ್ದು, ವಿಕ್ರಂಗೌಡನನ್ನು ಸೋಮವಾರ ಸಂಜೆ ಎನ್‌ಕೌಂಟರ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ 20 ವರ್ಷಗಳಿಂದಲೂ ಪೊಲೀಸರು ಆತನನ್ನು ಹುಡುಕುತ್ತಿದ್ದರು. ಅನೇಕ ಎನ್‌ಕೌಂಟರ್‌ನಲ್ಲೂ ಆತ ತಪ್ಪಿಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಸೋಮವಾರ ಸಂಜೆ ವಿಕ್ರಂಗೌಡನ ಎನ್‌ಕೌಂಟರ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


