ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಭಾರತೀಯ ರೈಲ್ವೆಯ ಒಂದಲ್ಲ ಒಂದು ಯಡವಟ್ಟುಗಳು ಸುದ್ದಿಯಾಗುತ್ತಲೇ ಇರುತ್ತವೆ. ಒಮ್ಮೊಮ್ಮೆ ರೈಲ್ವೆ ಸಿಬ್ಬಂದಿ ಮಾಡಿದ ತಪ್ಪುಗಳು ವೈರಲ್ ಆದರೆ ಅನೇಕ ಬಾರಿ ಟೆಂಡರ್ ತೆಗೆದುಕೊಂಡವರು ಮಾಡುವ ಕೆಲಸಗಳಿಂದ ಭಾರತೀಯ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆಗೊಳಗಾಗಿದೆ.
ಇದೀಗ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ರೈಲು ಕ್ಯಾಟರಿಂಗ್ ಸಿಬ್ಬಂದಿ ಪ್ರಯಾಣಿಕರು ತಿಂದು ಬಿಸಾಡಿದ ಅಲ್ಯೂಮಿನಿಯಂ ಪ್ಲೇಟ್‌ಗಳನ್ನು ತೊಳೆದು ಜೋಡಿಸುತ್ತಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ರೀತಿ ಬಳಸಿದ ಪ್ಲೇಟ್‌ಗಳನ್ನು ತೊಳೆದು ಮತ್ತೆ ಬೇರೆ ಪ್ರಯಾಣಿಕರಿಗೆ ನೀಡಲಾಗುತ್ತಾ ಎಂದು ಪ್ರಶ್ನಿಸಿದ್ದಾರೆ ಹಾಗೂ ಆತಂಕವನ್ನೂ ಸಹ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಈರೋಡ್ – ಜೋಗ್‌ಬಾನಿ ಮಾರ್ಗದ ವಂದೇ ಭಾರತ್ ರೈಲು ಸಂಖ್ಯೆ 16601ರಲ್ಲಿ ನಡೆದಿದೆ ಎನ್ನಲಾಗಿದೆ. ಈ ಕುರಿತು ಭಾರತೀಯ ರೈಲ್ವೆ ಸಹ ಪ್ರತಿಕ್ರಿಯಿಸಿದ್ದು, ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಸಂಬಂಧಿಸಿದ ವರ್ತಕರನ್ನು ಈಗಾಗಲೇ ಗುರುತಿಸಿ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಹಾಗೂ ದೊಡ್ಡ ದಂಡವನ್ನೂ ಸಹ ವಿಧಿಸಲಾಗಿದೆ ಎಂದು ಬರೆದುಕೊಂಡಿದೆ.
ಅತ್ತ ಎಕ್ಸ್‌ಪ್ರೆಸ್ ಫುಡ್ ಸರ್ವಿಸಸ್ ಸಹ ಈ ಬಗ್ಗೆ ಭಾರತೀಯ ರೈಲ್ವೆಗೆ ಪತ್ರ ಬರೆದಿದ್ದು, ವರ್ತಕರು ಬಳಸಿದ ಪ್ಲೇಟ್‌ಗಳನ್ನು ಹಾಗೂ ಬಾಟಲ್‌ಗಳನ್ನು ಮಾರಾಟ ಮಾಡುವ ಸಲುವಾಗಿ ಅವುಗಳನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಕಾರಣ ನೀಡಿದೆ. ಇದರಿಂದ ಸಣ್ಣ ಪ್ರಮಾಣದ ದುಡ್ಡು ಸಿಗುವ ಕಾರಣ ಈ ರೀತಿ ಮಾಡಿದ್ದಾರೆ ಎಂದು ಬರೆದುಕೊಂಡಿದೆ. ಅಲ್ಲದೇ ಇವುಗಳನ್ನು ತೊಳೆದು ತ್ಯಾಜ್ಯಗಳನ್ನು ಖರೀದಿಸುವವರಿಗೆ ಮಾರಾಟ ಮಾಡಲಾಗಿದೆಯೇ ಹೊರತು ಅವುಗಳನ್ನು ಇತರೆ ಪ್ರಯಾಣಿಕರಿಗೆ ಪುನಃ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


