ಬೆಂಗಳೂರು ನಗರದಲ್ಲಿ ಹಾಡಹಗಲೇ ಎಟಿಎಂಗೆ ಹಣ ತುಂಬಿಸುವ ವಾಹನವನ್ನು ತಡೆದು ಬುಧವಾರ 7 ಕೋಟಿ 11 ಲಕ್ಷ ರೂ. ದರೋಡೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಗುರುವಾರ ಎರಡೂವರೆ ವರ್ಷ ಪೂರೈಸಿದ್ದು, ಸರ್ಕಾರದ ಆಡಳಿತ, ಅದರಲ್ಲೂ ಗೃಹ ಸಚಿವರ ಆಡಳಿತದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ‘ಅಸಮರ್ಥ ಗೃಹ ಸಚಿವರ ಆಳ್ವಿಕೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆಕಾರರಿಗೆ ನೆಚ್ಚಿನ ತಾಣವಾಗಿದೆ’ ಎಂದು ಟೀಕೆ ಮಾಡಿದ್ದಾರೆ.
ಶಾಸಕರ ಪೋಸ್ಟ್ ಹೀಗಿದೆ
- ಅಕ್ಟೋಬರ್ 2024 : ದಾವಣಗೆರೆಯಲ್ಲಿ SBI ಬ್ಯಾಂಕ್ ದರೋಡೆ
- ಜನವರಿ 2025 : ಮಂಗಳೂರಿನ ಕೋಟೆಕಾರ್ ಸಹಕಾರಿ ಸಂಘದಲ್ಲಿ ದರೋಡೆ
- ಮೇ 2025 : ವಿಜಯಪುರದಲ್ಲಿಕೆನರಾ ಬ್ಯಾಂಕ್ ದರೋಡೆ
- ಸೆಪ್ಟೆಂಬರ್ 2025 : ವಿಜಯಪುರದಲ್ಲಿ SBI ಬ್ಯಾಂಕ್ ದರೋಡೆ
- ನಿನ್ನೆ, ಬೆಂಗಳೂರಿನ ಅಶೋಕ ಪಿಲ್ಲರ್ ಹತ್ತಿರ ಬ್ಯಾಂಕ್ ದರೋಡೆ
ಬ್ಯಾಂಕಿನಲ್ಲಿ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂದು ಸಾರ್ವಜನಿಕರು ಅಲ್ಲಿ ಹಣ ಇಡುತ್ತಾರೆ. ಅದನ್ನು ಸುರಕ್ಷಿತವಾಗಿ ಇಡಬೇಕಾದದ್ದು (safe custody) ಬ್ಯಾಂಕ್ ಹಾಗೂ ಸರ್ಕಾರದ ಕರ್ತವ್ಯ.
ಅಸಮರ್ಥ ಗೃಹ ಸಚಿವರ ಆಳ್ವಿಕೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆಕಾರರಿಗೆ ನೆಚ್ಚಿನ ತಾಣವಾಗಿದೆ. ಸಾರ್ವಜನಿಕ ಹಣವನ್ನು ದೋಚುವ ದರೋಡೆಕೋರರಿಗೆ ಯಾವುದೇ ಮುಲಾಜಿಲ್ಲದೆ shoot at sight ಆದೇಶವನ್ನು ನೀಡಿ.
ಮಕ್ಕಳ ವಿದ್ಯಾಭ್ಯಾಸ, ಮದುವೆ, ಇತರೆ ಖರ್ಚು ವೆಚ್ಚಗಳಿಗೆ ಬ್ಯಾಂಕ್ ಗಳಲ್ಲಿ ಹಣವಿಟ್ಟರೆ ಸುರಕ್ಷಿತವಾಗಿರುತ್ತದೆ ಎಂದು ನಂಬಿ ಇಟ್ಟಿರುತ್ತಾರೆ. ಆದರೆ, ಹಾಡ ಹಗಲೇ ಜಯನಗರದಂತ ಜನನಿಭಿಡ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಾರೆ ಎಂದರೆ ನಮ್ಮ ಗೃಹ ಇಲಾಖೆ ಎಷ್ಟರ ಮಟ್ಟಿಗೆ ನಿಷ್ಕ್ರಿಯವಾಗಿದೆ ಎಂಬುದು ಗೊತ್ತಾಗುತ್ತದೆ. ದರೋಡೆಕಾರರಿಗೆ, ಅತ್ಯಾಚಾರಿಗಳಿಗೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಮಾಜಘಾತುಕರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಿ.
ಬಿ.ವೈ.ವಿಜಯೇಂದ್ರ ಪೋಸ್ಟ್: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಕಾಂಗ್ರೆಸ್ ಸರ್ಕಾರದ ಆಡಳಿತದ ಕುರಿತು ಪೋಸ್ಟ್ ಹಾಕಿದ್ದಾರೆ.
‘ಕಾಂಗ್ರೆಸ್ ಸರ್ಕಾರದ ದುರಾಡಳಿತ, ವೈಫಲ್ಯ, ಭ್ರಷ್ಟಾಚಾರಗಳಿಗೆ ದಿನ ನಿತ್ಯ ನಡೆಯುತ್ತಿರುವ ಕರ್ಮಕಾಂಡಗಳೇ ಸಾಕ್ಷಿ ಹೇಳುತ್ತಿವೆ. ಅತ್ತ ಹಾವೇರಿಯಲ್ಲಿ ನವಜಾತ ಶಿಶುವಿನ ದುರಂತ ಅರೋಗ್ಯ ಇಲಾಖೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದ್ದರೆ, ಈಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿರುವ ದರೋಡೆ ಪ್ರಕರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಎಷ್ಟರ ಮಟ್ಟಿಗೆ ಮರೀಚಿಕೆಯಂತಾಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಜನರಿಗೆ Indian National Congress – Karnataka ಸರ್ಕಾರದ ಮೇಲೆ ನಂಬಿಕೆ ಎಂದೋ ಕಳೆದುಹೋಗಿದೆ. ಗೃಹ ಇಲಾಖೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಿಕೊಳ್ಳಲಾದರೂ ಕೂಡಲೇ ದರೋಡೆಕೋರರನ್ನು ಬಂಧಿಸಬೇಕಾಗಿದೆ’ ಎಂದು ಹೇಳಿದ್ದಾರೆ.
‘ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ATM ಕ್ಯಾಶ್ ವ್ಯಾನ್ ಅಡ್ಡಗಟ್ಟಿ ದರೋಡೆಕೋರರು 7 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದಾರೆ. ನಗರದ ಮಧ್ಯಭಾಗದಲ್ಲಿ, ಹಾಡುಹಗಲೇ ನಡೆದಿರುವ ದರೋಡೆ ಸಹಜವಾಗಿ ಜನರಲ್ಲಿ ಭೀತಿಯನ್ನು ಉಂಟುಮಾಡಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದುಷ್ಕರ್ಮಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿರುವುದು ಮೇಲಿಂದ ಮೇಲೆ ಸಾಬೀತಾಗುತ್ತಲೇ ಇದೆ. ಸರ್ಕಾರ ಕೂಡಲೇ ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಬಂಧಿಸಬೇಕು ಎಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆ’ ಎಂದು ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


