ಹೆಬ್ಬಾಳದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಹೆಬ್ಬಾಳ ಫ್ಲೈ ಓವರ್‌ಗೆ ಹೊಸ ಲೂಪ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಹೆಬ್ಬಾಳ ಫ್ಲೈ ಓವರ್ ಹೊಸ ಲೂಪ್ ಕಾಮಗಾರಿ ಮುಕ್ತಾಯವಾಗಿದ್ದು, ಇಂದು (ಶನಿವಾರ) ರಾತ್ರಿಯಿಂದಲೇ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಬಿಡಿಎ ಹೇಳಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಿರ್ಮಾಣ ಮಾಡಲಾಗಿರುವ ಈ ಹೊಸ ಲೂಪ್ ಉತ್ತರ ಬೆಂಗಳೂರಿನಿಂದ ಹೆಬ್ಬಾಳ ಫ್ಲೈ ಓವರ್ ಮೂಲಕ ನಗರ ಪ್ರವೇಶಿಸಲು ನೆರವಾಗಲಿದೆ ಎಂದು ಬಿಡಿಎ ತಿಳಿಸಿದೆ.
ಯಲಹಂಕ, ಜಕ್ಕೂರು, ಸಹಕಾರ ನಗರ ಕಡೆ ಕಡೆಯಿಂದ ಮೆಖ್ರೀ ಸರ್ಕಲ್ ತನಕ ವಾಹನಗಳು ತಡೆರಹಿತವಾಗಿ ಸಂಚರಿಸಬಹುದಾಗಿದೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬಳಿಕ ಔಪಚಾರಿಕವಾಗಿ ಈ ಫ್ಲೈ ಓವರ್ ಹೊಸ ಲೂಪ್ ಉದ್ಘಾಟನೆ ಮಾಡಲಾಗುತ್ತದೆ.
ಹೆಬ್ಬಾಳ ಫ್ಲೈ ಓವರ್ ಹೊಸ ಲೂಪ್ ಕುರಿತು ಬಿಡಿಎ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಆಗಾಗ ಮಾಹಿತಿಯನ್ನು ನೀಡುತ್ತಿತ್ತು. ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಸೂಚನೆಯಂತೆ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿತ್ತು.
ಹೆಬ್ಬಾಳ ಫ್ಲೈ ಓವರ್ ಹೊಸ ಲೂಪ್ ನಿರ್ಮಾಣ ಕಾಮಗಾರಿಯಲ್ಲಿ ಬಾಕಿ ಇದ್ದ ಎಲ್ಲಾ ಕಾಂಕ್ರಿಟ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು. ಈ ಹೊಸ ಲೂಪ್ ನಿರ್ಮಾಣವಾದ ನಂತರ ಉತ್ತರ ಬೆಂಗಳೂರಿನಿಂದ ನಗರ ಪ್ರವೇಶವು ಸುಗಮವಾಗಲಿದೆ ಎಂದು ಕೆಲವು ದಿನಗಳ ಹಿಂದೆ ಬಿಡಿಎ ಹೇಳಿತ್ತು.
ಈ ಹೊಸ ಲೂಪ್ ನಿರ್ಮಾಣದಿಂದ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ವಾಹನ ಸವಾರರಿಗೆ ಸಹಾಯಕವಾಗಲಿದೆ.
ಬಿಡಿಎ ಆಯುಕ್ತ ಮಣಿವಣ್ಣನ್ ಪಿ., “ಈ ತಿಂಗಳ ಅಂತ್ಯದ ವೇಳೆಗೆ ಹೆಬ್ಬಾಳ ಫ್ಲೈ ಓವರ್ 2ನೇ ಲೂಪ್ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ” ಎಂದು ಹೇಳಿದ್ದರು. ಡಿಸೆಂಬರ್ 20ರ ರಾತ್ರಿಯಿಂದಲೇ ಹೊಸ ಲೂಪ್‌ನಲ್ಲಿ ವಾಹನ ಸಂಚಾರ ಪ್ರಾರಂಭವಾಗಲಿದೆ.
ಹೆಬ್ಬಾಳ ಫ್ಲೈ ಓವರ್‌ನಲ್ಲಿ ಎರಡು ಹೊಸ ಲೂಪ್ ನಿರ್ಮಾಣ ಮಾಡಲಾಗುತ್ತಿತ್ತು. ಮೊದಲ ಲೂಪ್ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ವರ್ಷದ ಆಗಸ್ಟ್‌ನಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಲೂಪ್ ಅನ್ನು ಕೆಆರ್ ಪುರದಿಂದ ಬೆಂಗಳೂರು ನಗರಕ್ಕೆ ಬರುವ ವಾಹನಗಳ ಸಂಪರ್ಕವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿತ್ತು.
ಹೆಬ್ಬಾಳ ಫ್ಲೈ ಓವರ್‌ನಲ್ಲಿ 2 ಹೊಸ ಲೂಪ್ ನಿರ್ಮಾಣ ಮಾಡಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಬಿಡಿಎ ಯೋಜನೆಯಾಗಿತ್ತು. ಸುಮಾರು 87 ಕೋಟಿ ರೂ. ಮೊತ್ತದ ಯೋಜನೆಯನ್ನು 2016ರಲ್ಲಿ ಆರಂಭಿಸಲಾಗಿತ್ತು. ಆದರೆ ವಿವಿಧ ಕಾರಣಕ್ಕೆ ಕಾಮಗಾರಿ ವಿಳಂಬವಾಗಿತ್ತು.
ಬಿಡಿಎ ಹೆಬ್ಬಾಳ ವೃತ್ತವನ್ನು ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸುಲಭವಾಗಿ ಸಂಚರಿಸುವುದು ಮತ್ತು ನಗರಕ್ಕೆ ಸುಲಭವಾಗಿ ವಾಹನಗಳು ಆಗಮಿಸಲು ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.
ಫ್ಲೈ ಓವರ್ ಮೊದಲ ಲೂಪ್ ಉದ್ಘಾಟನೆ ಬಳಿಕ ಮಾತನಾಡಿದ್ದ ಡಿ.ಕೆ.ಶಿವಕುಮಾರ್, “ಹೊಸ 1.5 ಕಿ.ಮೀ ಸುರಂಗ ರಸ್ತೆಯನ್ನು ಹೆಬ್ಬಾಳದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ ಹೊಸ ಸುರಂಗ ರಸ್ತೆಯನ್ನು ಯೋಜಿಸಲಾಗುತ್ತಿದೆ” ಎಂದು ಹೇಳಿದ್ದರು.
“ನಗರದ ಸಂಚಾರ ದಟ್ಟಣೆ ಪರಿಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಹೊಸ 1.5 ಕಿ.ಮೀ ಸುರಂಗ ರಸ್ತೆಯ ಆರ್ಥಿಕ ಪರಿಣಾಮಗಳ ಕುರಿತು ನಾವು ಚರ್ಚಿಸಿದ್ದೇವೆ. ನವೆಂಬರ್ ವೇಳೆಗೆ ಇನ್ನೊಂದು ಲೂಪ್ ಅನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಡಿಎ ಅಧ್ಯಕ್ಷರು ವಹಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


