ಪಾಕಿಸ್ತಾನದ ಶೋಯೆಬ್ ಚೌಧರಿ ಹಾಗೂ ಸನಾ ಅಮ್ಜದ್ ಎಂಬ ಇಬ್ಬರು ಯುಟ್ಯೂಬರ್‌ಗಳು ಈ ಹಿಂದಿನಿಂದಲೂ ಪಾಕಿಸ್ತಾನದಲ್ಲಿನ ಅವ್ಯವಸ್ಥೆ ಕುರಿತು ವಿಡಿಯೊಗಳನ್ನು ಮಾಡುತ್ತಾ ಬಂದಿದ್ದಾರೆ. ಇನ್ನು ಈ ಇಬ್ಬರು ಯುಟ್ಯೂಬರ್‌ಗಳು ಪಾಕಿಸ್ತಾನದ ಅವ್ಯವಸ್ಥೆಗಳನ್ನು ಬಿಚ್ಚಿಡುವುದರ ಜೊತೆಗೆ ಪಾಕ್ ಜತೆಗೆ ಭಾರತವನ್ನು ಹೋಲಿಸಿ ವಿಡಿಯೊಗಳನ್ನು ಮಾಡಿದ್ದರು.
ಹೌದು, ಭಾರತ ಮುಂದುವರಿದಿದೆ, ಒಂದೇ ಕಾಲದಲ್ಲಿ ಎರಡೂ ದೇಶಗಳು ಸ್ವತಂತ್ರ ಪಡೆದರೂ ಸಹ ಪಾಕ್‌ಗಿಂತ ಭಾರತ ಅಭಿವೃದ್ಧಿ ಸಾಧಿಸಿದೆ ಎಂದು ವಿಡಿಯೊಗಳನ್ನು ಮಾಡಿದ್ದರು. ಈ ವಿಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಸಹ ಪಡೆದುಕೊಂಡಿದ್ದವು.
ಇನ್ನು ಭಾರತದ ಜತೆಗೆ ಮೋದಿ ಆಡಳಿತ ವೈಖರಿಯನ್ನು ಹೊಗಳಿ ಸರಣಿ ವಿಡಿಯೊಗಳನ್ನು ಈ ಇಬ್ಬರು ಯುಟ್ಯೂಬರ್‌ಗಳು ಮಾಡಿದ್ದರು. ಹೀಗೆ ಈ ಇಬ್ಬರು ಪಾಕ್‌ನಲ್ಲಿ ವೈರಲ್ ಆದ ಬೆನ್ನಲ್ಲೇ ಇನ್ನಷ್ಟು ಯುಟ್ಯೂಬರ್‌ಗಳು ಇವರ ಹಾದಿಯಲ್ಲೇ ವಿಡಿಯೊಗಳನ್ನು ಮಾಡಲು ಶುರು ಮಾಡಿದರು.
ಹೀಗೆ ಭಾರತವನ್ನು ಪಾಕ್ ಜೊತೆ ಹೋಲಿಸಿ ಅಲ್ಲಿನ ಅಭಿವೃದ್ಧಿಯನ್ನು ಟೀಕಿಸಿದ್ದ ಒಟ್ಟು 12 ಯುಟ್ಯೂಬರ್‌ಗಳನ್ನು ಪಾಕ್ ಸೇನೆ ಗಲ್ಲಿಗೇರಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕಳೆದ 21 ದಿನಗಳಿಂದ ಈ ಯುಟ್ಯೂಬರ್‌ಗಳ ಚಾನೆಲ್‌ನಲ್ಲಿ ಯಾವುದೇ ವಿಡಿಯೊ ಅಪ್‌ಲೋಡ್ ಆಗದ ಕಾರಣ ಇಂತಹ ಸುದ್ದಿಗಳು ಸಾಕಷ್ಟು ಹರಿದಾಡಿದ್ದವು.
ಆದರೆ ಶೋಯೆಬ್ ಚೌಧರಿ ಇದೀಗ ತಮ್ಮ ದಿ ರಿಯಲ್ ಎಂಟರ್‌ಟೈನ್‌ಮೆಂಟ್ ಚಾನೆಲ್‌ನಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದು, ಪೊಲೀಸರು ತಮ್ಮನ್ನು ಮಧ್ಯರಾತ್ರಿ ಎಳೆದೊಯ್ದು ಹಿಂಸೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ತಾವು ಸಾವನ್ನಪ್ಪಿದ್ದಾರೆ ಎಂದು ಹರಿದಾಡಿದ್ದ ಸುದ್ದಿಗಳ ಬಗ್ಗೆಯೂ ಸಹ ಪ್ರತಿಕ್ರಿಯಿಸಿದ ಅವರು ತಾನು ಬದುಕಿದ್ದು, ಈ ಹಿಂದಿನಂತೆ ವಿಡಿಯೊ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಪಾಕ್ ಸೇನೆ ಹಾಗೂ ಪೊಲೀಸರು ತಪ್ಪು ಮಾಡಿದರೆ ಅಂತಹ ವಿಷಯಗಳ ಮೇಲೆ ವಿಡಿಯೊ ಮಾಡುವುದಾಗಿ ತಮ್ಮ ಫಾಲೋವರ್ಸ್‌ಗೆ ಭರವಸೆ ನೀಡಿದ್ದಾರೆ. ಅಲ್ಲದೇ ತನಗೆ ಅತಿಹೆಚ್ಚು ಫಾಲೋವರ್ಸ್ ಇರುವ ಕಾರಣ ಯುವ ಜನತೆಯನ್ನು ಒಟ್ಟುಗೂಡಿಸಿ ಹೊಸ ಪಕ್ಷ ಸ್ಥಾಪಿಸಿಬಿಡಬಹುದು ಎಂಬ ಭಯ ಪಾಕ್ ಸೇನೆಗಿದೆ ಎಂದೂ ಸಹ ಹೇಳಿಕೊಂಡಿದ್ದಾರೆ.
ಇನ್ನು ಉಳಿದ 11 ಯುಟ್ಯೂಬರ್‌ಗಳು ಇನ್ನೂ ಯಾವುದೇ ವಿಡಿಯೊ ಮಾಡಿಲ್ಲ. ಆದರೆ ಯುಟ್ಯೂಬರ್‌ಗಳನ್ನು ಗಲ್ಲಿಗೇರಿಸಲಾಗಿದೆ ಎಂದು ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಪತ್ರಕರ್ತೆ ಅರ್ಜೂ ಕಾಜ್ಮಿ ಇದೆಲ್ಲಾ ಸುಳ್ಳು ಎಂದು ತಳ್ಳಿಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


