ಬೆಂಗಳೂರು: ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ನಿನ್ನೆ ( ಏಪ್ರಿಲ್ 20 ) ಹತ್ಯೆಗೀಡಾಗಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್‌ನ ತಮ್ಮ ನಿವಾಸದಲ್ಲಿಯೇ ಓಂ ಪ್ರಕಾಶ್ ಅವರ ಹತ್ಯೆ ನಡೆದಿದ್ದು, ಸದ್ಯ ಮನೆಯಲ್ಲಿಯೇ ಇದ್ದ ಪತ್ನಿ ಪಲ್ಲವಿಯವರೇ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗಂಡ ಹಾಗೂ ಹೆಂಡತಿ ನಡುವೆ ಕಳೆದ ಕೆಲ ದಿನಗಳಿಂದಲೂ ಕಲಹ ನಡೆಯುತ್ತಿತ್ತು ಎನ್ನಲಾಗದ್ದು, ಪೊಲೀಸರಿಗೆ ಸ್ವತಃ ಓಂ ಪ್ರಕಾಶ್ ಅವರ ಪತ್ನಿಯೇ ಕರೆ ಮಾಡಿ ಹತ್ಯೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬರಬೇಕಿದ್ದು, ಸದ್ಯ ಪೊಲೀಸರು ಓಂ ಪ್ರಕಾಶ್ ಪತ್ನಿ ಹಾಗೂ ಮಗಳು ಕೃತಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಪತ್ನಿ ಪಲ್ಲವಿ ತಾನೇ ಗಂಡನನ್ನು ಕೊಂದೆ ಎಂದು ಹೇಳಿದ್ದಾರೆ. ಹಲವು ದಿನಗಳಿಂದ ತನ್ನನ್ನು ಹಾಗೂ ತನ್ನ ಮಗಳನ್ನು ಕೊಲ್ಲುತ್ತೇನೆ ಎಂದು ಗನ್ ಹಿಡಿದುಕೊಂಡು ಓಡಾಡುತ್ತಿದ್ದರು, ಇಂದು ಬೆಳಗ್ಗೆಯಿಂದ ಸಹ ವಿವಿಧ ವಿಷಯಗಳಿಗೆ ಜಗಳ ಆಗುತ್ತಲೇ ಇತ್ತು. ಆ ವೇಳೆ ಅವರು ನಮ್ಮನ್ನು ಕೊಲ್ಲಲು ಮುಂದಾದರು ಈ ವೇಳೆ ರಕ್ಷಣೆಗೆ ಕೊಲೆ ಮಾಡಿದೆವು ಎಂದಿದ್ದಾರೆ ಎಂದು ಮೂಲಗಳು ಮಾಹಿತಿ ತಿಳಿಸಿವೆ.
ಇನ್ನು ಕೊಲೆ ಮಾಡುವ ಮುನ್ನ ಖಾರದ ಪುಡಿ ಹಾಗೂ ಎಣ್ಣೆ ಬಳಸಿ ಓಂ ಪ್ರಕಾಶ್ ಅವರ ಮೇಲೆ ಹಲ್ಲೆ ಮಾಡಿದ್ದ ಪಲ್ಲವಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಕೈಗೆ, ಕುತ್ತಿಗೆಗೆ, ಎದೆ ಭಾಗಕ್ಕೆ ಸುಮಾರು ಹತ್ತು ಬಾರಿ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಮತ್ತೋರ್ವ ನಿವೃತ್ತ ಡಿಜಿಪಿ ದಂಪತಿಗೆ ಕೊಲೆ ಮಾಡಿದ ಬಳಿಕ ವಿಡಿಯೊ ಕರೆ ಮಾಡಿದ್ದ ಪತ್ನಿ ಪಲ್ಲವಿ ನಾನು ದೈತ್ಯನನ್ನು ಕೊಂದೆ ( i have killed the monster ) ಎಂದು ಹೇಳಿಕೊಂಡಿದ್ದರಂತೆ. ಸದ್ಯ ಇದಿಷ್ಟು ಮಾಹಿತಿ ಹರಿದಾಡುತ್ತಿದ್ದು, ಪೊಲೀಸರ ತನಿಖೆಯಲ್ಲಿ ಸಂಪೂರ್ಣ ಮಾಹಿತಿ ಹೊರಬೀಳಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


