ಬಿಹಾರ ಚುನಾವಣೆ 2025 ದಿನಾಂಕ ಘೋಷಣೆಗೂ ಮೊದಲೇ ಆರ್ಜೆಡಿ ನೇತೃತ್ವದಲ್ಲಿ ‘ಮಹಾಘಟಬಂಧನ್’ ರಚನೆಗೊಂಡಿತ್ತು. ಆದರೆ ಈ ಮೈತ್ರಿಕೂಟದ ಸೀಟು ಹಂಚಿಕೆ ಇನ್ನೂ ಸಹ ರಹಸ್ಯವಾಗಿಯೇ ಉಳಿದಿದೆ. ಎಷ್ಟು ಸೀಟುಗಳು ಕಾಂಗ್ರೆಸ್ಗೆ, ಎಷ್ಟು ಆರ್ಜೆಡಿಗೆ, ಫ್ರೆಂಡ್ಲಿ ಫೈಟ್ ಎಷ್ಟರಲ್ಲಿ? ಎಂಬುದು ವಿರೋಧ ಪಕ್ಷದ ಲೇವಡಿಗೆ ಕಾರಣವಾಗಿದೆ.
ನವೆಂಬರ್ 6, 11ರಂದು ಎರಡು ಹಂತದಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. 243 ಸೀಟುಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಎನ್ಡಿಎ ಮತ್ತು ಇಂಡಿಯಾ ಅಥವ ಮಹಾಘಟಬಂಧನ್ ಮೈತ್ರಿಕೂಟ ಎದುರಾಳಿಗಳು.
ಎರಡೂ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಮಹಾಘಟಬಂಧನ್ನಲ್ಲಿ ಆರ್ಜೆಡಿ 143, ಕಾಂಗ್ರೆಸ್ 61 ಸೀಟುಗಳಲ್ಲಿ ಕಣಕ್ಕಿಳಿದಿದೆ. ಆದರೆ ಹಲವು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಪಕ್ಷಗಳ ಅಭ್ಯರ್ಥಿಗಳೇ ಎದುರಾಳಿಗಳಾಗಿದ್ದು, ಜನರು ಗೊಂದಲಗೊಂಡಿದ್ದಾರೆ.
ಮಹಾಘಟಬಂಧನ್ ಮೈತ್ರಿಕೂಟ: ಸದ್ಯಕ್ಕೆ ಪಕ್ಷಗಳು ಘೋಷಣೆ ಮಾಡಿರುವ ಅಭ್ಯರ್ಥಿಗಳ ಪ್ರಕಾರ ಆರ್ಜೆಡಿ 143, ಕಾಂಗ್ರೆಸ್ 61, ಸಿಪಿಐ(ಎಂಎಲ್) 20 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಉಳಿದ ಕ್ಷೇತ್ರವನ್ನು ವಿಐಪಿ, ಸಿಪಿಐ(ಎಂ) ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. 9 ಕ್ಷೇತ್ರಗಳಲ್ಲಿ ಮೈತ್ರಿಕೂಟದ ವಿವಿಧ ಪಕ್ಷಗಳು ಅಭ್ಯರ್ಥಿಗಳನ್ನು ಹಾಕಿದ್ದು, ಅವರೇ ಎದುರಾಳಿಗಳಾಗಿದ್ದಾರೆ.
ಆರ್ಜೆಡಿ ಮತ್ತು ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಎದುರಾಳಿಗಳು. ಇನ್ನೂ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 2ನೇ ಹಂತದ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಇನ್ನೂ ಸಮಯವಿದ್ದು, ಈ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುತ್ತಾರೆ? ಕಾದು ನೋಡಬೇಕಿದೆ.
ಕಾಂಗ್ರೆಸ್ ಪಕ್ಷ 2 ಹಂತಗಳಿಗೆ ಸೇರಿ 61 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 70 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿತ್ತು, ಗೆದ್ದಿದ್ದು ಕೇವಲ 19 ಸೀಟು. ಆದರೆ ಆರ್ಜೆಡಿ ಪಟ್ಟು ಹಿಡಿದ್ದ ಕುಟುಂಬ ಕ್ಷೇತ್ರವನ್ನು ಅದು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಕುಮಾರ್ ರಾಮ್.
ಆರ್ಜೆಡಿ-ಕಾಂಗ್ರೆಸ್ ಸೀಟು ಹಂಚಿಕೆ ಗೊಂದಲದ ಕುರಿತು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೀಟು ಹಂಚಿಕೆ ಮಾತುಕತೆ ಅಂತಿಮಗೊಳಿಸಲು ನಮ್ಮ ಹೈಕಮಾಂಡ್ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈತ್ರಿಕೂಟದ ಭಾಗವಾಗಿದ್ದ ಜೆಎಂಎಂ ಪಕ್ಷ 10 ಸೀಟು ಬೇಕು ಎಂದು ಪಟ್ಟುಹಿಡಿದಿತ್ತು. ಸೀಟು ಸಿಗದ ಕಾರಣ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಹೇಳಿತ್ತು. ಆದರೆ ಈಗ ಬಿಹಾರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದೆ. ಆಮ್ ಆದ್ಮಿ ಪಕ್ಷ ಸಹ ಇಂಡಿಯಾ ಮೈತ್ರಿಕೂಟದಲ್ಲಿದ್ದರೂ ಏಕಾಂಗಿಯಾಗಿ ಬಿಹಾರದಲ್ಲಿ ಚುನಾವಣೆ ಎದುರಿಸಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


