ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಇಂದು ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರ ಹೊಸ ದಿಗಂತದತ್ತ ಮುಖಮಾಡಿದೆ. ಭಾರತದ ಮೊದಲ ಪ್ರವಾಸೋದ್ಯಮ, ಕಲೆ ಹಾಗೂ ಸಂಸ್ಕೃತಿಗೆ ಸೇವೆಯನ್ನೊದಗಿಸುವ ಒನ್‌ಟ್ಯಾಕ್ ( OneTAC ) ತನ್ನ ಮೊದಲ ಉಡುಪಿ ಎಕ್ಸ್‌ಪೀರಿಯನ್ಸ್ ಸರ್ಕ್ಯೂಟ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ.
ಕಾರ್ಯಕ್ರಮದಲ್ಲಿ ಏಕ್ಸೆಲ್‌ನ ಪಾಲುದಾರ ಮತ್ತು ಕರ್ನಾಟಕ ಸ್ಟಾರ್ಟ್‌ಅಪ್ ವಿಷನ್ ಗ್ರೂಪ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಹಾಗೂ ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ ಐಎಎಸ್ ಭಾಗವಹಿಸಿದರು. ಇನ್ನು ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದಡಿ ಕೇಂದ್ರ ಸರ್ಕಾರದಿಂದಲೇ ಈ ಯೋಜನೆಗೆ ಮನ್ನಣೆ ದೊರೆತಿರುವುದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಎರಡನ್ನೂ ಒಳಗೊಂಡ ಬೆಳವಣಿಗೆಯ ಪ್ರಬಲ ಎಂಜಿನ್ ಒನ್‌ಟ್ಯಾಕ್ ಸ್ಥಳೀಯ ಸೃಜನಶೀಲರನ್ನು ಶಕ್ತಿಗೊಳಿಸುವ ನಿಜವಾದ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ ಎಂದು ಪ್ರಶಾಂತ್ ಪ್ರಕಾಶ್ ಹೇಳಿದರು.
ಉಡುಪಿ ಸರ್ಕ್ಯೂಟ್ ಅನ್ನು ಕಲ್‌ಕೀ ಫೌಂಡೇಷನ್, ಸಂಹಿತಾ, ಗುಡ್‌ಪಾಸ್, ರೂಬಿಕ್ಸ್ ಮತ್ತು ಪ್ಯಾರಡೈಸ್ ಗ್ರೂಪ್ ಸೇರಿ ಹಲವು ಸಂಸ್ಥೆಗಳು ಸಹಭಾಗಿತ್ವದಲ್ಲಿ ನಿರ್ಮಿಸಿವೆ.
ಉಡುಪಿ ಸರ್ಕ್ಯೂಟ್‌ನ ಉದ್ದೇಶ:
ಇದು ಸಮುದಾಯ–ಚಾಲಿತ ಪ್ರವಾಸೋದ್ಯಮಕ್ಕೆ ಮಾದರಿಯಾಗಲಿದೆ — ಸ್ಥಳೀಯ ಕಲಾವಿದರು, ಹಸ್ತಕಲಾವಿದರು, ಮಾರ್ಗದರ್ಶಕರು, ಮೀನುಗಾರರು, ಕಥೆಗಾರರು ಸೇರಿದಂತೆ ಮೈಕ್ರೋ ಉದ್ಯಮಿಗಳಿಗೆ ನೇರ ಅವಕಾಶ ಸೃಷ್ಟಿಸುವ ಗುರಿಯಿದೆ.
ಮೊದಲ ಹಂತದಲ್ಲಿ 6 ವಿಭಾಗಗಳ 15ಕ್ಕೂ ಹೆಚ್ಚು ಎಕ್ಸ್‌ಪೀರಿಯನ್ಸ್ ಟ್ರಯಲ್‌ಗಳು ಸಿದ್ಧವಾಗಿವೆ. ದೇವಾಲಯ–ಪರಂಪರೆ ಟ್ರಯಲ್‌ಗಳಿಂದ ಹಿಡಿದು ಪಶ್ಚಿಮ ಘಟ್ಟದ ಅರಣ್ಯ, ಕರಾವಳಿಯ ವಿವಿಧ ಖಾದ್ಯ, ಭೂತಕೋಲ, ಯಕ್ಷಗಾನ, ಕಂಬಳಾದಂತಹ ಆಚರಣೆ, ಸಮುದ್ರ ಕ್ರೀಡೆ, ಆರೋಗ್ಯ ಮತ್ತು ಆಯುರ್ವೇದ ಹೀಗೆ ಎಲ್ಲವನ್ನೂ ಒಂದು ವೇದಿಕೆಯಲ್ಲೇ ಒದಗಿಸುವ ಯೋಜನೆ ಇದಾಗಿದೆ.
“ಉಡುಪಿ ಸರ್ಕ್ಯೂಟ್ ಸಮುದಾಯ–ಕೇಂದ್ರಿತ ಪ್ರವಾಸೋದ್ಯಮದತ್ತ ಕರ್ನಾಟಕ ಕೈಗೊಂಡ ಮಹತ್ವದ ಹೆಜ್ಜೆ. ಶೀಘ್ರದಲ್ಲೇ ಆರಂಭವಾಗುವ KCCD ಮುಖಾಂತರ ಕರ್ನಾಟಕದ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಿದೆ ಎಂದು ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ ಐಎಎಸ್ ಹೇಳಿದರು.
ಈ ಸಂದರ್ಭದಲ್ಲಿ ಒನ್‌ಟ್ಯಾಕ್ ಇಂಪ್ಯಾಕ್ಟ್ ಹಣಕಾಸನ್ನು ಸಹ ಘೋಷಿಸಲಾಯಿತು. ಇದು ಸಣ್ಣ ಉದ್ಯಮಿಗಳಿಗೆ ಜೀವನೋಪಾಯ ಮತ್ತು ಪ್ರವಾಸೋದ್ಯಮ ಸಾಮರ್ಥ್ಯ ವೃದ್ಧಿಗೆ ನೆರವಾಗಲಿದೆ. ಸಂಸ್ಕೃತಿ, ಪ್ರಕೃತಿ, ಆಹಾರ ಮತ್ತು ಸಮುದಾಯ ಜೀವನದ ಅಪೂರ್ವ ಸಂಯೋಜನೆಯಾದ ಉಡುಪಿ ಸರ್ಕ್ಯೂಟ್ ಈಗ ಒನ್‌ಟ್ಯಾಕ್ ಮೂಲಕ ದೇಶ–ವಿದೇಶದ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿ ಹೆಸರು ಮಾಡಲು ಸಜ್ಜಾಗಿದೆ.
ಕರ್ನಾಟಕದ ಎಕ್ಸ್‌ಪೀರಿಯನ್ಸ್ ಪ್ರವಾಸೋದ್ಯಮದ ಹೊಸ ಯುಗಕ್ಕೆ ಚಾಲನೆ ನೀಡಿದ ಒನ್‌ಟ್ಯಾಕ್ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸಲಿರುವ ನಿರೀಕ್ಷೆಯಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


