ಏಷ್ಯಾಕಪ್ ಅಂಡರ್ ೧೯ ಟೂರ್ನಿಯ ಫೈನಲ್ ಪಂದ್ಯ ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಬರೋಬ್ಬರಿ 347 ರನ್ ದಾಖಲಿಸಿ ಭಾರತಕ್ಕೆ 348 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡು ಎದುರಾಳಿ ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಈ ಬೃಹತ್ ಮೊತ್ತ ಪೇರಿಸಿದೆ.
ಪಾಕ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಹಮ್ಝ ಜರೂರ್ 18 ರನ್ ಬಾರಿಸಿ ಔಟ್ ಆದರೆ, ಮತ್ತೋರ್ವ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ 113 ಎಸೆತಗಳಲ್ಲಿ 17 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 172 ರನ್ ಚಚ್ಚಿದರು. ಇನ್ನುಳಿದಂತೆ ಉಸ್ಮಾನ್ ಖಾನ್ 35, ಅಹ್ಮದ್ ಹುಸೇನ್ 56, ಫರ್ಹಾನ್ ಯೂಸುಫ್ 19, ಹುಝೈಫ ಅಹ್ಸನ್ ಡಕ್‌ಔಟ್, ಮೊಹಮ್ಮದ್ ಶಯನ್ 7, ಅಬ್ದುಲ್ ಸುಭಾನ್ 2, ನಿಖಬ್ ಶಫೀಖ್ ಅಜೇಯ 12 ಹಾಗೂ ಮೊಹಮ್ಮದ್ ಶಯ್ಯಮ್ ಅಜೇಯ 13 ರನ್ ಬಾರಿಸಿದರು.
ಭಾರತದ ಪರ ದೀಪೇಶ್ ದೇವೇಂದ್ರನ್ ಮೂರು ವಿಕೆಟ್, ಹೆನಿಲ್ ಪಟೇಲ್ ಹಾಗೂ ಖಿಲನ್ ಪಟೇಲ್ ತಲಾ ಎರಡೆರಡು ವಿಕೆಟ್ ಮತ್ತು ಕನಿಷ್ಕ್ ಚೌಹಾಣ್ ಒಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


