ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ಆಗಸ್ಟ್ 1ರೊಳಗೆ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿಯನ್ನು ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಹಾಗೂ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಆ.1ರೊಳಗೆ ಒಳಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಮುಂದಿನ ತಿಂಗಳ ಆಗಸ್ಟ್.1ರೊಳಗೆ ಎಸ್ಸಿ ಒಳಮೀಸಲಾತಿ ಜಾರಿ ಮಾಡಬೇಕು. ನ್ಯಾಯಾಲಯವು ಈಗಾಗಲೇ ಸ್ಪಷ್ಟ ಆದೇಶ ನೀಡಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಇನ್ನು ನಮ್ಮ ಸಮುದಾಯದ ಸಹನೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ಕೊಟ್ಟರು.
ಆಗಸ್ಟ್.1ರ ತನಕ ನಾವು ಕಾಯುತ್ತೇವೆ. ಅಷ್ಟರೊಳಗೆ ಸರ್ಕಾರ ಎಲ್ಲವನ್ನು ಸರಿಪಡಿಸಿ ಜಾರಿ ಮಾಡದಿದ್ದರೆ ಆ.16ರಿಂದ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಅಸಹಕಾರ ಹೋರಾಟ ಮಾಡುತ್ತೇವೆ. ತಾಲ್ಲೂಕು ಕಚೇರಿಗಳಿಗೆ ಬೀಗ ಹಾಕುವ ಚಳುವಳಿ ಮಾಡುತ್ತೇವೆ ಎಂದು ಗುಡುಗಿದರು.
ಒಳಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ಆದೇಶಿಸಿದ್ದು, ರಾಜ್ಯ ಸರ್ಕಾರ ಇನ್ನೂ ನ್ಯಾಯಾಲಯದ ಆದೇಶವನ್ನು ಜಾರಿಗೆ ತಂದಿಲ್ಲ. ನಿವೃತ್ತ ನ್ಯಾ.ನಾಗಮೋಹನ ದಾಸ್ ಆಯೋಗ ರಚಿಸಿ ಸರ್ಕಾರ ವಿಳಂಬ ಮಾಡುತ್ತಿದೆ. ಕುಂಟು ನೆಪ ಹೂಡಿ ಸರ್ಕಾರ ಒಳಮೀಸಲಾತಿ ಜಾರಿ ಮಾಡುತ್ತಿಲ್ಲ ಎಂದು ದೂರಿದರು.
ಬಿಜೆಪಿಯಲ್ಲಿ ದಲಿತ ನಾಯಕರಾದ ಕಾರಜೋಳ ಅಥವಾ ಛಲವಾದಿ ನಾರಾಯಣಸ್ವಾಮಿ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂಬ ಸಿದ್ದರಾಮಯನವರ ಸವಾಲಿಗೆ ಪ್ರತಿಕ್ರಿಯಿಸಿದ ಕಾರಜೋಳ, ಸಿಎಂ ಈ ರೀತಿಯ ಹೇಳಿಕೆ ಕೊಟ್ಟಿರುವುದು ಸಂತೋಷವೇ. ಈ ಹಿಂದೆ ನಾನೂ ಮತ್ತು ಸಿದ್ದರಾಮಯ್ಯ ಒಂದೇ ಪಕ್ಷದಲ್ಲಿದ್ದೆವು. ಆ ಅಭಿಮಾನಕ್ಕೆ ಸಿದ್ಧರಾಮಯ್ಯ ಆ ಮಾತು ಹೇಳಿರಬೇಕು ಅಥವಾ ಇನ್ಯಾವುದೋ ಕಾರಣಕ್ಕೆ ಹೇಳಿರಬಹುದು ಎಂದು ಸಮಜಾಯಿಷಿ ನೀಡಿದರು.
ಮುಖ್ಯಮಂತ್ರಿ ಮಾಡುವ ಅವಕಾಶ ಈಗ ಇರುವುದು ಕಾಂಗ್ರೆಸ್‍ಗೆ. ಸಿದ್ದರಾಮಯ್ಯ ಅವರು ಈಗ ತಮ್ಮ ಸ್ಥಾನವನ್ನು ದಲಿತರಿಗೆ ಬಿಟ್ಟು ಕೊಡಲಿ, ಈಗ ಅವರಿಗೆ ಅವಕಾಶ ಇರುವುದು. ಹಾಗಾಗಿ ಮೊದಲು ಕಾಂಗ್ರೆಸ್‍ನವರು ದಲಿತರನ್ನು ಸಿಎಂ ಮಾಡಲಿ ಎಂದು ಹೇಳಿದರು.
ವಾಟ್ಸಾಪ್ ಆಪ್ ತೆರೆಯದೇ ಮೆಸೇಜ್ ಓದುವುದು ಹೇಗೆ? ಬ್ಲೂ ಟಿಕ್ ಬಾರದ ಟ್ರಿಕ್ ಇಲ್ಲಿದೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


