ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಇದೇ 25ರಂದು ತೆರೆಗೆ ಬರಲು ಸಿದ್ಧವಾಗಿದೆ. ಒಂದು ಚಿತ್ರ ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದೆ ಎಂದರೆ ಆ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿರುತ್ತವೆ.
ಪ್ರೇಕ್ಷಕರಲ್ಲ. ಸ್ವತಃ ಚಿತ್ರತಂಡವೇ ವಿವಿಧ ಸಂದರ್ಶನಗಳಲ್ಲಿ ಭಾಗವಹಿಸಿ ತಮ್ಮ ಚಿತ್ರದ ಬಗ್ಗೆ ಮಾತನಾಡಿ, ತಮ್ಮ ಚಿತ್ರದ ವಿಶೇಷತೆಗಳನ್ನು ತಿಳಿಸಿ ಚಿತ್ರದ ಮೇಲೆ ಹೈಪ್ ಹೆಚ್ಚಾಗುವಂತೆ ಮಾಡುತ್ತಾರೆ. ಸಿನಿಮಾ ಹೆಂಗಿದೆ ಗುರೂ ಎಂದು ಕೇಳುತ್ತಿದ್ದ ಸಿನಿ ರಸಿಕ ಟ್ವಿಟರ್‌ನಲ್ಲಿ ಆ ಚಿತ್ರದ ಹ್ಯಾಷ್‌ಟ್ಯಾಗ್ ಸರ್ಚ್ ಮಾಡಿ ಚಿತ್ರ ನೋಡೋದಾ ಬೇಡ್ವಾ ಎಂದು ತೀರ್ಮಾನಿಸುವ ಡಿಜಿಟಲ್ ಯುಗವಿದು.
ಇಂತಹ ಸಿನಿ ರಸಿಕನನ್ನು ಸೆಳೆಯಬೇಕೆಂದರೆ ಚಿತ್ರತಂಡ ಅಂತಹ ಸಾಹಸವನ್ನು ಮಾಡಲೇಬೇಕು ಬಿಡಿ. ಆದರೆ ಇಂತಹ ಚಿಂತನೆ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರತಂಡಕ್ಕಿಲ್ಲ ಎಂಬುದು ಸ್ವತಃ ಕಿಚ್ಚ ಸುದೀಪ ಅವರ ಅಭಿಮಾನಿಗಳ ಅಭಿಪ್ರಾಯ.
ಹೌದು, ಮ್ಯಾಕ್ಸ್ ಕುರಿತು ಸುದೀಪ್ ಅಭಿಮಾನಿಗಳು ಬೇಸರಕ್ಕೊಳಗಾಗಿದ್ದಾರೆ. ಚಿತ್ರ ಬಿಡುಗಡೆಗೆ ಇನ್ನು ಕೇವಲ ಮೂರು ದಿನ ಬಾಕಿ ಇದೆ, ಆದರೂ ಇನ್ನೂ ಟ್ರೈಲರ್ ಬಿಡುಗಡೆಯಾಗಿಲ್ಲ, ಬೆಳಗ್ಗೆ ಟ್ರೈಲರ್ ಎಂದು ಹೇಳಿದ್ರೂ ಇನ್ನೂ ಬಿಡುಗಡೆಯಾಗಿಲ್ಲ, ಆನ್‌ಲೈನ್ ಟಿಕೆಟ್ ಬುಕಿಂಗ್ ಸಹ ವಿಳಂಬ, ಚಿತ್ರಮಂದಿರಗಳನ್ನೂ ಸಹ ಸರಿಯಾಗಿ ಲಾಕ್ ಮಾಡಲಾಗಿಲ್ಲ ಎಂಬ ಸಾಲು ಸಾಲು ಸಮಸ್ಯೆಗಳಿಂದ ಕಿಚ್ಚ ಫ್ಯಾನ್ಸ್ ಬೇಸತ್ತು ಹೋಗಿದ್ದಾರೆ.
ಈ ಕುರಿತಂತೆ ಅಭಿಮಾನಿಯೋರ್ವ ಟ್ವೀಟ್ ಮಾಡಿದ್ದು “ಸುದೀಪ್ ಅಣ್ಣ ಕ್ಷಮಿಸಿ. ನನ್ನ ಹತಾಶೆಯನ್ನು ತಡೆದುಕೊಳ್ಳಾಗ್ತಿಲ್ಲ. ಅಣ್ಣ ನೀವು ಇಂಟರ್ವ್ಯೂ ಅಲ್ಲಿ ಮಾತನಾಡೋಕೂ, ನೀವು ಮಾಡೋ ಕೆಲಸಗಳಿಗೂ ಸಂಬಂಧವೇ ಇಲ್ಲ. ನೀವು ಯಾವಾಗ ಕೇವಲ ನಟರಾಗಿ ಮಾತ್ರ ಒಂದು ಚಿತ್ರದಲ್ಲಿ ಭಾಗಿ ಆಗ್ತೀರೋ ಅವತ್ತು ನಿಮಗೆ ಅತೀ ದೊಡ್ಡ ಹಿಟ್ ಸಿನಿಮಾ ಸಿಗುತ್ತೆ, ಅಲ್ಲಿಯ ತನಕ ನೀವು ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ. ನಿಮ್ಮ ಸುತ್ತಲೂ ಇರೋ yes boss ಜನರೇ ನಿಮಗೆ ಮುಳುವಾಗ್ತಾರೆ. ನಿಮಗೆ ನಟನೆ/ಸಿನಿಮಾ ವ್ಯಾಪಾರದಲ್ಲಿ ಸಾಕಷ್ಟು ಅನುಭವ ಇರ್ಬೋದು, ಆದರೆ ನಿಮಗೆ ಇಂದಿನ ಮಾರ್ಕೆಟಿಂಗ್ ಬಗ್ಗೆ ಎಳ್ಳಷ್ಟೂ ಜ್ಞಾನ ಇಲ್ಲ ಅನ್ನೋದು ಮತ್ತೆ ಮತ್ತೆ ನಿರೂಪಿಸುತ್ತಿದ್ದೀರ. ನಿಮ್ಮ ಅಭಿಮಾನಿಗಳನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ಮೊದಲು ಬಿಡಿ.” ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್‌ಗೆ ಇನ್ನೂ ಹಲವಾರು ಸುದೀಪ್ ಫ್ಯಾನ್ಸ್ ರಿಪ್ಲೈ ಮಾಡಿದ್ದು ಈ ಟ್ವೀಟ್‌ಗೆ ಸಮರ್ಥನೆ ಕೊಟ್ಟಿದ್ದಾರೆ. ಹೌದು, ಸುದೀಪ್ ಅವರು ಸಿನಿಮಾವನ್ನು ಹಾಗೂ ಅಭಿಮಾನಿಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅದಕ್ಕೆ ಇಷ್ಟೆಲ್ಲಾ ನಡೆಯುತ್ತಿದೆ. ಹೀಗಾದರೆ ಮುಂದಿನ ಸಿನಿಮಾಗಳಲ್ಲಿ ಸುದೀಪ್ ಸ್ಟಾರ್‌ಡಂ ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


