ಬೆಂಗಳೂರು: ಉದ್ಯೋಗದ ಹಬ್, ಶಿಕ್ಷಣದ ಕಾಶಿ, ಹಚ್ಚ ಹಸಿರಿನ ಉದ್ಯಾನ ನಗರಿ.. ಹೀಗೆ ವಿದೇಶಿಯರನ್ನೂ ಸೆಳೆಯುವ ಬೆಂಗಳೂರಿನ ‘ಅಸಲಿ ಮುಖ’ ಈಗ ಜಗತ್ತಿನ ಮುಂದೆ ಅನಾವರಣಗೊಂಡಿದೆ. ನಗರದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಬಡಾವಣೆ ಎನಿಸಿಕೊಂಡಿರುವ ಇಂದಿರಾನಗರದ ಪಾದಚಾರಿ ಮಾರ್ಗಗಳ (Footpath) ದುಸ್ಥಿತಿಯನ್ನು ಕೆನಡಾ ಮೂಲದ ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದು, ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬೆಂಕಿಯಂತೆ ಹಬ್ಬಿದೆ.
ಕೆನಡಾ ಮೂಲದ ಕೇಲೆಬ್ ಫ್ರೈಸೆನ್ (Caleb Friesen) ಎಂಬುವವರು ತಮ್ಮ ಪುಟ್ಟ ಮಗನೊಂದಿಗೆ ಇಂದಿರಾನಗರದ ಡಬಲ್ ರೋಡ್‌ನಲ್ಲಿ ಸಾಗುವಾಗ ಎದುರಿಸಿದ ಸಂಕಷ್ಟಗಳನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳು ಬೆಂಗಳೂರಿನ ಮೂಲಸೌಕರ್ಯಗಳ ದೈನೇಸಿ ಸ್ಥಿತಿಯನ್ನು ಅಣಕಿಸುವಂತಿವೆ.ಹೆಜ್ಜೆ ಇಟ್ಟರೆ ಎಲ್ಲಿ ಕಾಲು ಮುರಿಯುತ್ತದೋ ಎಂಬಂತೆ ಕಿತ್ತುಹೋಗಿರುವ ಚಪ್ಪಡಿಗಳು.ಪಾದಚಾರಿ ಮಾರ್ಗವನ್ನೇ ಆಕ್ರಮಿಸಿಕೊಂಡಿರುವ ಗಿಡದ ಕುಂಡಗಳು, ಮರಗಳು ಮತ್ತು ಸಾಲಾಗಿ ನಿಲ್ಲಿಸಿರುವ ವಾಹನಗಳು.ಫುಟ್‌ಪಾತ್ ಮೇಲೆ ನಡೆಯಲು ಜಾಗವಿಲ್ಲದೆ, ಮಗುವಿನ ಕೈ ಹಿಡಿದು ಜೀವ ಕೈಯಲ್ಲಿ ಹಿಡಿದು ಮುಖ್ಯ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ.
ತಮ್ಮ ಪೋಸ್ಟ್‌ನಲ್ಲಿ ಕೇಲೆಬ್ ಹೀಗೆ ಬರೆದುಕೊಂಡಿದ್ದಾರೆ: ಇಂದಿರಾನಗರದಂತಹ ಅತ್ಯಂತ ದುಬಾರಿ ಬಡಾವಣೆಯ ಪಾದಚಾರಿಗಳ ಸ್ಥಿತಿ ಹೀಗಿದೆ. ಇಲ್ಲಿ ನಡೆಯುವುದು ಅಸಾಧ್ಯವಾಗಿದೆ. ನಮ್ಮ ಮಕ್ಕಳಿಗೆ ಇಂದಿಗಿಂತ ಉತ್ತಮವಾದ ವ್ಯವಸ್ಥೆ ಸಿಗಬೇಕು ಎಂದು ನಾನು ಆಶಿಸುತ್ತೇನೆ. ಇದೇ ವೇಳೆ ಅವರು ಒಂದು ಸಕಾರಾತ್ಮಕ ಅಂಶವನ್ನೂ ಹೇಳಿದ್ದಾರೆ. ಇತರ ಭಾರತೀಯ ನಗರಗಳಿಗೆ ಹೋಲಿಸಿದರೆ ಅಟ್ಲೀಸ್ಟ್ ಇಂದಿರಾನಗರದಲ್ಲಿ ಪಾದಚಾರಿ ಮಾರ್ಗಗಳಾದರೂ ಇವೆ, ಇದು ಸಮಾಧಾನಕರ ವಿಷಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ನಿವಾಸಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ:
ನಾನು ಪ್ರತಿದಿನ ಇಲ್ಲಿ ನಡೆಯುತ್ತೇನೆ, ಆದರೆ ಇಲ್ಲಿನ ಅವ್ಯವಸ್ಥೆಗೆ ಎಷ್ಟು ಹೊಂದಿಕೊಂಡಿದ್ದೇನೆ ಎಂದರೆ ಈಗ ಇದೇ ಸರಿ ಎನಿಸುತ್ತಿದೆ. ನನ್ನ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.
ಟೆಕ್ ಸಿಟಿ ಬೆಂಗಳೂರಿನ ಅಸಲಿ ಮುಖ ಇದು. ನಾವು ಕಟ್ಟುವ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲ” ಎಂದು ಇನ್ನೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್;4 ಜಿಲ್ಲೆಗಳಲ್ಲಿ ಭ್ರಷ್ಟರ ಮನೆ ಬಾಗಿಲು ತಟ್ಟಿದ ಅಧಿಕಾರಿಗಳು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


