ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಇಂದು (ಮಂಗಳವಾರ) ಬೆಳ್ಳಂಬೆಳಗ್ಗೆ 6 ಗಂಟೆಗೇ ಏಕಕಾಲಕ್ಕೆ ವಿವಿಧ ಅಧಿಕಾರಿಗಳ ಮನೆ ಬಾಗಿಲು ತಟ್ಟಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ. ಅಧಿಕಾರಿಗಳ ಐಷಾರಾಮಿ ಬಂಗಲೆಗಳು, ವಿಶಾಲವಾದ ತೋಟದ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ತಂಡಗಳು, ಇಂಚಿಂಚೂ ಜಾಗವನ್ನು ಬಿಡದೆ ಶೋಧ ಕಾರ್ಯ ನಡೆಸಿವೆ.
ಈ ಕಾರ್ಯಾಚರಣೆಯು ಮುಖ್ಯವಾಗಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ (DA Case) ಅಡಿಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದ್ದು, ಪರಿಶೀಲನೆಯ ವೇಳೆ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಸ್ಥಿರ ಆಸ್ತಿಗಳ (ಸೈಟು, ಮನೆ) ಪತ್ರಗಳನ್ನು ಅಧಿಕಾರಿಗಳು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಈ ಹಠಾತ್ ದಾಳಿಯು ಸರ್ಕಾರಿ ವಲಯದಲ್ಲಿ ಭಾರೀ ನಡುಕ ಹುಟ್ಟಿಸಿದೆ
ಜಿಲ್ಲಾವಾರು ದಾಳಿಯ ವಿವರ :
ಬಾಗಲಕೋಟೆ & ಗದಗ: ಬಾಗಲಕೋಟೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ (DRDA) ಶ್ಯಾಂ ಸುಂದರ್ ಕಾಂಬಳೆ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಬಾಗಲಕೋಟೆ ನಗರ ಹಾಗೂ ಗದಗ ಜಿಲ್ಲೆಯ ನರಗುಂದದಲ್ಲಿರುವ ಇವರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಲಾಗುತ್ತಿದೆ.
ವಿಜಯಪುರ: ಬಸವನಬಾಗೇವಾಡಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಅವರ ನಿವಾಸವೂ ಲೋಕಾಯುಕ್ತ ಬಲೆಯಲ್ಲಿ ಸಿಲುಕಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ದೂರಿನ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಉತ್ತರ ಕನ್ನಡ: ಸಿದ್ದಾಪುರ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಮಾರುತಿ ಯಶವಂತ ಮಾಳವಿ ಅವರ ನಿವಾಸದ ಮೇಲೂ ದಾಳಿಯಾಗಿದೆ. ಕಚೇರಿ ಹಾಗೂ ಮನೆಗಳಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ರಾಯಚೂರು: ಇಲ್ಲಿ ನಿವೃತ್ತ ಸಹಾಯಕ ಇಂಜಿನಿಯರ್ ವಿಜಯಲಕ್ಷ್ಮೀ ಅವರ ಮನೆಯ ಮೇಲೆ ದಾಳಿ ನಡೆದಿದೆ. ಅವರ ‘ಶ್ರೀ ರೇಣುಕಾ ನಿಲಯ’ದಲ್ಲಿ ಅಧಿಕಾರಿಗಳ ತಂಡ ತಪಾಸಣೆ ನಡೆಸುತ್ತಿದ್ದು, ನಿವೃತ್ತಿಯ ನಂತರವೂ ಅಕ್ರಮ ಆಸ್ತಿ ಗಳಿಕೆಯ ಆರೋಪ ಇವರ ಮೇಲಿದೆ.
ದಾಳಿಂಬೆ ಎಂದರೆ ಕೇವಲ ಹಣ್ಣಲ್ಲ, ಇದು ಸರ್ವರೋಗಕ್ಕೂ ಮದ್ದು! ಇದರ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ಅಚ್ಚರಿ ಪಡ್ತೀರಾ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


