ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ ಜನರಿಗೆ ಸಿಹಿಸುದ್ದಿ. ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಮಂಗಳವಾರದಿಂದಲೇ 6ನೇ ರೈಲು ಸಂಚಾರ ಆರಂಭವಾಗಿದೆ. ಇದರಿಂದಾಗಿ 13 ನಿಮಿಷಗಳ ಅವಧಿಯಲ್ಲಿ ಈ ಮಾರ್ಗದಲ್ಲಿ ರೈಲುಗಳು ಸಂಚಾರ ನಡೆಸಲಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಈ ಕುರಿತು ಮಾಹಿತಿ ನೀಡಿದೆ. ದಿನಾಂಕ 23ನೇ ಡಿಸೆಂಬರ್ 2025ರಿಂದ ಹಳದಿ ಮಾರ್ಗದಲ್ಲಿ 6ನೇ ರೈಲು ಸಂಚಾರ ನಡೆಸಲಿದೆ ಎಂದು ಹೇಳಿದೆ. ಈ ರೈಲು ಸಂಚಾರದಿಂದ ಈ ಮಾರ್ಗದಲ್ಲಿ ಮೆಟ್ರೋ ರೈಲು ಕಾಯುವಿಕೆಯ ಅವಧಿ ಕಡಿಮೆಯಾಗಲಿದೆ.
ಹಳದಿ ಮಾರ್ಗದಲ್ಲಿ 6ನೇ ಮೆಟ್ರೋ ರೈಲು ಸೇವೆಯನ್ನು ಮಂಗಳವಾರದಿಂದ ಪ್ರಾರಂಭಿಸಲಾಗುತ್ತಿದೆ. ಈ ರೈಲು ಸೇರ್ಪಡೆಯೊಂದಿಗೆ ಸೋಮವಾರ-ಶನಿವಾರದ ತನಕ ಜನದಟ್ಟನೆಯ ಅವಧಿಯಲ್ಲಿ ಮೆಟ್ರೋ ಸೇವೆಗಳು ಪ್ರಸ್ತುತ ಇರುವ 15 ನಿಮಿಷಗಳ ಅಂತರದ ಬದಲು 13 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿವೆ ಎಂದು ತಿಳಿಸಿದೆ.
ಭಾನುವಾರಗಳಂದು ಪೀಕ್ ಅವಧಿಯ ಸೇವಾ ಅವಧಿ 15 ನಿಮಿಷಗಳಾಗಿಯೇ ಮುಂದುವರಿಯಲಿದೆ. ಆರ್.ವಿ.ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳ ಎರಡೂ ಟರ್ಮಿನಲ್ಗಳಿಂದ ಮೊದಲ ಹಾಗೂ ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ, ಮೆಟ್ರೋ ರೈಲು ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಪ್ರತಿದಿನ ಸುಮಾರು 80,000 ಪ್ರಯಾಣಿಕರು ಈ ಮಾರ್ಗದಲ್ಲಿ ಸದ್ಯ ಸಂಚಾರವನ್ನು ನಡೆಸುತ್ತಿದ್ದಾರೆ.
ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಆಗಸ್ಟ್ 11ರಂದು ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿತ್ತು. ಆಗ 3 ರೈಲುಗಳ ಜೊತೆಗೆ ಸಂಚಾರವನ್ನು ಪ್ರಾರಂಭಿಸಲಾಗಿತ್ತು.
ನವೆಂವರ್ 1ರಂದು 5ನೇ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಆಗ 15 ನಿಮಿಷಕ್ಕೆ ಒಂದು ರೈಲು ಸಂಚಾರವನ್ನು ನಡೆಸಲು ಪ್ರಾರಂಭಿಸಿತು. ಮಾರ್ಗದಲ್ಲಿ ಬೆಳಗ್ಗೆ 5 ಗಂಟೆಗೆ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇದ್ದು, ಇನ್ನೂ ಸಹ ಇದಕ್ಕೆ ಬಿಎಂಆರ್ಸಿಎಲ್ ಒಪ್ಪಿಗೆ ನೀಡಿಲ್ಲ.
ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಕಾರಣ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಬಹಳ ಅನುಕೂಲವಾಗಿದೆ. ಇದರಿಂದಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ರೈಲು ಓಡುತ್ತದೆ.
ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲನ್ನು ಓಡಿಸಲು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ. ಆದರೆ ಸದ್ಯ ಚಾಲಕ ಸಹಿತ ಮೆಟ್ರೋ ರೈಲು ಓಡುತ್ತಿದೆ. ಆದರೆ ಮೆಟ್ರೋ ರೈಲುಗಳ ಕೊರತೆ ಕಾರಣ ಮಾರ್ಗದಲ್ಲಿ ಸದ್ಯ ಕೇವಲ 6 ರೈಲು ಓಡುತ್ತಿದೆ.
ಬಿಎಂಆರ್ಸಿಎಲ್ ಮಾಹಿತಿ ಪ್ರಕಾರ ಕೆಲವೇ ದಿನಗಳಲ್ಲಿ 7ನೇ ರೈಲು ಬೆಂಗಳೂರು ನಗರಕ್ಕೆ ಬರಲಿದ್ದು, ಜನವರಿ 17ರ ಬಳಿಕ ಸಂಚಾರವನ್ನು ಆರಂಭಿಸುವ ನಿರೀಕ್ಷೆ ಇದೆ. ಆಗ ಹೆಚ್ಚಿನ ರೈಲುಗಳು ಮಾರ್ಗದಲ್ಲಿ ಸಂಚಾರವನ್ನು ಪ್ರಾರಂಭಿಸಲಿವೆ.
ನಮ್ಮ ಮೆಟ್ರೋ ಹಳದಿ ಮಾರ್ಗ ಬೆಂಗಳೂರು ನಗರದ ಬಹುನಿರೀಕ್ಷಿತ ರೈಲು ಮಾರ್ಗವಾಗಿತ್ತು. 19.15 ಕಿ.ಮೀ. ಮಾರ್ಗದಲ್ಲಿ 16 ಮೆಟ್ರೋ ನಿಲ್ದಾಣಗಳಿವೆ. ನಗರದ ಸಾಫ್ಟ್ವೇರ್ ಕಂಪನಿಗಳ ದೇಣಿಗೆಯನ್ನು ಪಡೆದು ಈ ಮಾರ್ಗದಲ್ಲಿ ಮೆಟ್ರೋ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಈ ಮಾರ್ಗದಲ್ಲಿ ನಿರ್ಮಾಣ ಮಾಡಲಾಗಿದೆ. ಮೊದಲ ಹಂತದಲ್ಲಿ ವಾಹನಗಳು, 2ನೇ ಹಂತದಲ್ಲಿ ಮೆಟ್ರೋ ರೈಲು ಸಾಗುವಂತೆ ಫ್ಲೈ ಓವರ್ ವಿನ್ಯಾಸಗೊಳಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


