ದುಬೈ: ನಿನ್ನೆ (ಫೆಬ್ರವರಿ 23) ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಐದನೇ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಪಾಕ್ ನೀಡಿದ್ದ 242 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 42.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿತು.
ಇನ್ನು ಭಾರತದ ಗೆಲುವಿಗೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗ ಉತ್ತಮ ಕೊಡುಗೆ ನೀಡಿದವು. ಅದರಲ್ಲಿಯೂ ಪಾಕ್ ವಿರುದ್ಧ ಸದಾ ಗುಡುಗುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಸಹ ತಮ್ಮ ಕಾಯಕವನ್ನು ಮುಂದುವರಿಸಿದರು.
ಕೊಹ್ಲಿ ಈ ಇನ್ನಿಂಗ್ಸ್ ಮೂಲಕ ತಮ್ಮ ವೃತ್ತಿ ಜೀವನದ 82ನೇ ಶತಕವನ್ನು ಸಹ ಬಾರಿಸಿದರು. ಕೊಹ್ಲಿ ಶತಕ ಬಾರಿಸುವುದು ಪಕ್ಕಾ ಎಂದು ಕೂತಿದ್ದ ಅಭಿಮಾನಿಗಳಿಗೂ ಸಹ ಕೊಹ್ಲಿ ಶತಕ ಬಾರಿಸಲಿದ್ದಾರಾ ಎಂಬ ಅನುಮಾನ ಕಾಡಿತ್ತು. ಏಕೆಂದರೆ ಪಾಕ್ ತಂಡದ ಶಾಹಿನ್ ಅಫ್ರಿದಿ ಬೇಕಂತಲೇ ಮೂರು ವೈಡ್ ಎಸೆದು ಕೊಹ್ಲಿ ಶತಕ ವಂಚಿತರಾಗುವಂತೆ ಮಾಡುವ ಯತ್ನ ಮಾಡಿದರು.
ಈ ಅಡೆತಡೆಯ ನಡುವೆಯೂ ಕೊಹ್ಲಿ ಪಂದ್ಯದ ಕೊನೆಯ ಎಸೆತದಲ್ಲಿ ಶತಕ ಬಾರಿಸುವಲ್ಲಿ ಯಶಸ್ವಿಯಾದರು. ಭಾರತಕ್ಕೆ ಗೆಲ್ಲಲು 2 ರನ್ ಬೇಕಿದ್ದರೆ, ಕೊಹ್ಲಿ ಶತಕಕ್ಕೆ 4 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಡಗ್‌ಔಟ್‌ನಲ್ಲಿ ಕುಳಿತಿದ್ದ ನಾಯಕ ರೋಹಿತ್ ಶರ್ಮಾ “ವಿರಾಟ್.. ಸಿಕ್ಸ ಬಾರಿಸಿ ಮುಗಿಸಿಬಿಡು” ಎಂದು ಕೊಹ್ಲಿಗೆ ಕೂಗಿ ಹೇಳಿದರು.
ಅಂತಿಮವಾಗಿ ಕೊನೆಯ ಎಸೆತದಲ್ಲಿ ಶತಕಕ್ಕೆ ಬೇಕಾಗಿದ್ದ ಬೌಂಡರಿ ಬಾರಿಸಿದ ಕೊಹ್ಲಿ ಕೊನೆಗೂ ಶತಕ ಪೂರೈಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


