ಲಕ್ನೋ: ನಿನ್ನೆ ( ಮೇ 23 ) ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ ಹೈದರಾಬಾದ್ 42 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಆರ್‌ಸಿಬಿ ಅಗ್ರಸ್ಥಾನಕ್ಕೇರುವುದನ್ನು ಕೈತಪ್ಪಿಸಿದೆ.
ಮೊದಲು ಬ್ಯಾಟಿಂಗ್ ಮಾಡಿರುವ ಸನ್‌ರೈಸರ್ಸ್ ಹೈದಾರಾಬಾದ್ ಇಶಾನ್ ಕಿಶನ್ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಕಲೆಹಾಕಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 232 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.5 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲ್‌ಔಟ್ ಆಯಿತು.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಆರ್‌ಸಿಬಿಗೆ ಕೊಹ್ಲಿ ಹಾಗೂ ಸಾಲ್ಟ್ ಜೋಡಿ ಅತ್ಯುತ್ತಮ ಆರಂಭವನ್ನೇ ಕಟ್ಟಿಕೊಟ್ಟಿತು. 7 ಓವರ್‌ಗಳಲ್ಲಿ 80 ರನ್‌ಗಳ ಜತೆಯಾಟವನ್ನಾಡಿದರು. ತಂಡ 15 ಓವರ್‌ಗೆ 167 ರನ್ ಕಲೆಹಾಕಿ ಕೇವಲ 3 ವಿಕೆಟ್ ಕಳೆದುಕೊಂಡಿತ್ತು. ಕೊನೆಯ 30 ಎಸೆತಗಳಲ್ಲಿ ಗೆಲ್ಲಲು 65 ರನ್‌ಗಳ ಅಗತ್ಯವಿತ್ತು ಹಾಗೂ ಕೈನಲ್ಲಿ 7 ವಿಕೆಟ್‌ಗಳಿದ್ದವು.
ಜಿತೇಶ್ ಶರ್ಮಾ ಹಾಗೂ ರಜತ್ ಪಟಿದಾರ್ ಕಣದಲ್ಲಿದ್ದರು. ಈ ಸಂದರ್ಭದಲ್ಲಿ ಎಲ್ಲರೂ ಪಂದ್ಯ ಆರ್‌ಸಿಬಿಯದ್ದೇ ಎಂದುಕೊಂಡಿದ್ದರು. ಆದರೆ ಆ ಬಳಿಕ ನಡೆದದ್ದೇ ಬೇರೆ. ಇಶಾನ್ ಮಲಿಂಗ ಎಸೆದ 16ನೇ ಓವರ್‌ನ ಮೊದಲ ಎಸೆತ ಲೆಗ್‌ಬೈಸ್ ಫೋರ್ ಹಾಗೂ ನಂತರದ ಎಸೆತಗಳಲ್ಲಿ ತಲಾ ಒಂದೊಂದು ರನ್ ಬಂತು. ಹೀಗೆ 15.3 ಓವರ್‌ಗಳಲ್ಲಿ 173 ರನ್ ಕಲೆಹಾಕಿತು. ಓವರ್‌ನ ನಾಲ್ಕನೇ ಎಸೆತದಲ್ಲಿ ಪಟಿದಾರ್ ರನ್‌ಔಟ್ ಆದರು. ಅದೇ ಓವರ್‌ನ ಅಂತಿಮ ಎಸೆತದಲ್ಲಿ ಆಗ ತಾನೇ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ ಔಟ್ ಆದರು.
ಬೆನ್ನಲ್ಲೇ 17ನೇ ಓವರ್‌ನಲ್ಲಿ ಜಿತೇಶ್ ಶರ್ಮಾ ಸಹ ವಿಕೆಟ್ ಒಪ್ಪಿಸಿದರು ಹಾಗೂ 18ನೇ ಓವರ್‌ನಲ್ಲಿ ಟಿಮ್ ಡೇವಿಡ್ ಔಟ್ ಆದರು. ಬಳಿಕ 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಕ್ಲೀನ್ ಬೌಲ್ಡ್ ಆದರೆ, ಕೃನಾಲ್ ಪಾಂಡ್ಯ ಹಿಟ್ ವಿಕೆಟ್‌ಗೆ ಬಲಿಯಾದರು. ಅಂತಿಮವಾಗಿ 19ನೇ ಓವರ್‌ನ ಐದನೇ ಎಸೆತದಲ್ಲಿ ಯಶ್ ದಯಾಳ್ ವಿಕೆಟ್ ಒಪ್ಪಿಸಿದರು.
ಹೀಗೆ ಕೊನೆಯ 7 ವಿಕೆಟ್‌ಗಳನ್ನು ಕೇವಲ 16 ರನ್‌ಗೆ ಕಳೆದುಕೊಳ್ಳುವ ಮೂಲಕ ಆರ್‌ಸಿಬಿ ಗೆಲ್ಲಬಹುದಿದ್ದ ಪಂದ್ಯವನ್ನು ಕೈಚೆಲ್ಲಿ ನಗೆಪಾಟಲಿಗೀಡಾಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


