Sunday, November 1, 2026
spot_img
More
    spot_img
    HomeBreaking Newsದರ್ಶನ್ ಪತ್ನಿ ಮಗನ ಸೀಟು ವಿಚಾರದಲ್ಲಿ ಭೇಟಿ: ಡಿ.ಕೆ.ಶಿವಕುಮಾರ್

    ದರ್ಶನ್ ಪತ್ನಿ ಮಗನ ಸೀಟು ವಿಚಾರದಲ್ಲಿ ಭೇಟಿ: ಡಿ.ಕೆ.ಶಿವಕುಮಾರ್

    ಸದಾಶಿವನಗರದ ತಮ್ಮ ನಿವಾಸಕ್ಕೆ ವಿಜಯಲಕ್ಷ್ಮಿ ಅವರು ಬಂದ ಕಾರಣ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಉತ್ತರಿಸಿದ ಶಿವಕುಮಾರ್ ಅವರು, “ದರ್ಶನ್, ವಿಜಯಲಕ್ಷ್ಮಿ ಪುತ್ರ ಈ ಮೊದಲು ನಮ್ಮ ಶಾಲೆಯಲ್ಲಿ ಓದುತ್ತಿದ್ದರು. ಕಾರಣಾಂತರಗಳಿಂದ ನಮ್ಮ ಶಾಲೆ ತೊರೆದು ಬೇರೆ ಶಾಲೆ ಸೇರಿದ್ದರು. ಈಗ ಮತ್ತೆ ಮರಳಿ ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಲು ಬಂದಿದ್ದರು. ನಮ್ಮ ಶಾಲೆಯ ಪ್ರಾಂಶುಪಾಲರು ಪ್ರವೇಶ ಅವಕಾಶ ನಿರಾಕರಿಸಿದ್ದರಿಂದ ನನ್ನ ಬಳಿ ಸೀಟು ಕೇಳಲು ಬಂದಿದ್ದರು,” ಎಂದು ಹೇಳಿದರು.

    “ಶಾಲೆಯ ದಾಖಲಾತಿಗೆ ಕೆಲವು ನಿಯಮಾವಳಿಗಳಿವೆ. ನಾನು ಶಾಲೆಗೆ ಅಷ್ಟಾಗಿ ಭೇಟಿ ನೀಡುತ್ತಿಲ್ಲ. ಶಾಲೆಯ ಆಡಳಿತ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಕ್ಕಳಿಗೆ ವಹಿಸಿದ್ದೇನೆ. ವಿಜಯಲಕ್ಷ್ಮಿ ಅವರು ಮಗನ ಭವಿಷ್ಯದ ದೃಷ್ಟಿಯಿಂದ ಬಂದಿದ್ದರು. ಜತೆಗೆ ನಮ್ಮ ಶಾಲೆಯ ಪಕ್ಕದಲ್ಲೇ ಅವರ ನಿವಾಸವಿದೆ. ನಾನು ಆ ಮಗುವಿಗೆ ಒಳ್ಳೆಯದಾಗಲಿ ಎಂದು ಪ್ರಾಂಶುಪಾಲರನ್ನು ಭೇಟಿ ಮಾಡಲು ಹೇಳಿದ್ದೇನೆ,” ಎಂದರು.

    ವಿಜಯಲಕ್ಷ್ಮಿ ಅವರು ನೆರವು ಕೇಳಿದರೆ ಸಹಾಯ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನನ್ನನ್ನು ಭೇಟಿಗೆ ಬಂದವರನ್ನು ನಿರಾಕರಿಸಲು ಹೇಗೆ ಸಾಧ್ಯ? ಅಲ್ಲದೆ ನಮ್ಮ ಶಾಲೆಯ ಪಕ್ಕದಲ್ಲೇ ಅವರ ಮನೆ ಇದೆ. ನಮ್ಮ ಲೋಕಸಭಾ ಕ್ಷೇತ್ರದಲ್ಲೇ ಅವರ ಮನೆ ಇದೆ. ನನ್ನನ್ನು ಭೇಟಿಗೆ ನೂರಾರು ಜನರು ಬರುತ್ತಾರೆ. ನೀವು (ಮಾಧ್ಯಮದವರು) ಕೂಡ ಬಂದಿದ್ದೀರಿ. ನಿಮ್ಮ ಭೇಟಿಗೆ ನಿರಾಕರಿಸಿದರೆ ಡಿ.ಕೆ. ಶಿವಕುಮಾರ್ ದುರಹಂಕಾರಿ ಎನ್ನುತ್ತೀರಿ. ಸಾರ್ವಜನಿಕ ಜೀವನದಲ್ಲಿ ಇದ್ದಾಗ, ಸಹಾಯ ಕೇಳಿಕೊಂಡು ಬಂದವರಿಗೆ ಭೇಟಿಯಾಗಿ ಸಹಾಯ ಮಾಡುವುದು ನನ್ನ ಕರ್ತವ್ಯ,” ಎಂದು ಹೇಳಿದರು.

    “ಆ ಹೆಣ್ಣುಮಗಳಿಗೆ ತನ್ನ ಮಗನ ಶಿಕ್ಷಣದ ಬಗ್ಗೆ ಕಾಳಜಿಯಿದೆ. ಎಲ್ಲಾ ಮಕ್ಕಳು ಒಂದೇ ಅಲ್ಲವೇ? ಅವರಿಗೆ ಮಗನ ಶಿಕ್ಷಣದ ಬಗ್ಗೆ ಇರುವ ಕಾಳಜಿ ನೋಡಿ ಬಹಳ ಸಂತೋಷವಾಯಿತು. ಬೇರೆ ಶಾಲೆಗೆ ಸೇರಿಸಿದರೆ ಮಾನಸಿಕವಾಗಿ ತೊಂದರೆಯಾಗಬಹುದು. ನಮ್ಮ ಶಾಲೆಗೆ ಸೇರಿಸಿದರೆ ಹತ್ತಿರದಲ್ಲೇ ಇರುವುದರಿಂದ ಹೋಗಿಬರಲು ಅನುಕೂಲ ಆಗುತ್ತದೆ. ಈ ಹಿಂದೆ ಪೋಷಕರ ಸಭೆಗೆ ಅವರನ್ನು ಕರೆಸಲಾಗಿತ್ತು. ಆ ವೇಳೆ ದರ್ಶನ್ ಕೂಡ ಬಂದಿದ್ದರು,” ಎಂದರು.

    ಕಾನೂನಿನ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ:

    ನಟ ದರ್ಶನ್ ಅವರಿಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸಲಾಗುವುದು ಎಂದು ರಾಮನಗರದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಮಾಧ್ಯಮದವರು ಕೇಳಿದಾಗ, “ನಿನ್ನೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ವಿಜಯಲಕ್ಷ್ಮಿ ಅವರು ನನ್ನನ್ನು ಭೇಟಿಗೆ ಬಂದಿದ್ದರು. ಎಲ್ಲೆಂದರಲ್ಲಿ ಭೇಟಿಗೆ ಸಾಧ್ಯವಿಲ್ಲ. ಮನೆಗೆ ಬಂದು ಭೇಟಿಯಾಗಿ ಎಂದು ಇಂದು ಬೆಳಗ್ಗೆ ಸಮಯ ಕೊಟ್ಟಿದ್ದೆ. ಅವರು ನಿನ್ನೆ ಭೇಟಿಗೆ ಯತ್ನಿಸಿದಾಗ ಬಹುಶಃ ದರ್ಶನ್ ಪ್ರಕರಣದ ವಿಚಾರವಾಗಿ ಮಾತನಾಡಲು ಬರುವರು ಎಂದು ಭಾವಿಸಿದ್ದೆ,“ ಎಂದರು.

    “ಮಂಗಳವಾರ ರಾತ್ರಿ ರಾಮನಗರದಲ್ಲಿ ನಡೆದ ಚಾಮುಂಡೇಶ್ವರಿ ಕರಗ ಸಮಾರಂಭದಲ್ಲಿ ನೆರೆದಿದ್ದ ಯುವಕರು ದರ್ಶನ್ ಮೇಲಿನ ಅಭಿಮಾನದಿಂದ ನ್ಯಾಯ ಕೊಡಿಸಿ ಎಂದು ಗಲಾಟೆ ಮಾಡುತ್ತಿದ್ದರು. ಭಾಷಣ ಮಾಡಲು ಅವಕಾಶವೇ ನೀಡುತ್ತಿರಲಿಲ್ಲ. ನಮ್ಮ ಕ್ಷೇತ್ರದ ಹುಡುಗರು, ದರ್ಶನ್ ಅಭಿಮಾನಿಗಳು ಎಂದು ಕಾಣುತ್ತಿದೆ. ಬಾಸ್, ಬಾಸ್ ಎಂದು ಕೂಗುತ್ತಿದ್ದರು. ನಾನು ಯಾರಪ್ಪ ಬಾಸ್ ಎಂದು ನೋಡಿದಾಗ ದರ್ಶನ್ ಫೋಟೋ ಹಿಡಿದುಕೊಂಡಿದ್ದರು. ಆಗ ಅವರ ಸಮಾಧಾನಕ್ಕೆ ನ್ಯಾಯ ಕೊಡಿಸೋಣ ಎಂದು ಹೇಳಿದೆ,” ಎಂದು ವಿವರಿಸಿದರು.

    “ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ. ನಾವು ಯಾವುದೇ ಕಾರಣಕ್ಕೂ ಪೊಲೀಸ್ ವಿಚಾರಣೆ, ನ್ಯಾಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಮಾಡಲೂಬಾರದು. ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನು ಇದೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಒಂದೇ. ಏನೂ ಬೇಕಾದರೂ ಆಗಬಹುದು,” ಎಂದರು.

    ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸಲಾಗುವುದು ಎನ್ನುವ ಹೇಳಿಕೆಯ ಬಗ್ಗೆ ಮತ್ತೆ ಕೇಳಿದಾಗ, “ಒಂದೊಂದು ಮಾಧ್ಯಮಗಳಲ್ಲಿ ಒಂದೊಂದು ರೀತಿಯ ವರದಿ ಬರುತ್ತಿವೆ. ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ಸಂಪೂರ್ಣವಾಗಿ ಗಮನಿಸಿಲ್ಲ, ನೋಡಲು ಸಮಯವೂ ಇಲ್ಲ. ಮಾಧ್ಯಮಗಳ ವರದಿಯ ಆಧಾರದ ಮೇಲೆ ತೀರ್ಮಾನಕ್ಕೆ ಬರಲು ಆಗುವುದಿಲ್ಲ. ನಾನು ಈ ಪ್ರಶ್ನೆಗೆ ಉತ್ತರ ನೀಡಲು ಗೃಹ ಸಚಿವನೂ ಅಲ್ಲ,” ಎಂದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search