ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ರಾಜ್ಯ ಸರ್ಕಾರದ ಆದೇಶವು ತಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಯಾಗಿದೆ ಎಂದು ಆರೋಪಿಸಿ ಸರ್ಕಾರಿ ಶಾಲೆಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ತೊರೆದಿರುವ ಘಟನೆ ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದಲ್ಲಿ ಪ್ರಸಿದ್ದ ವೀರಭದ್ರೇಶ್ವರಸ್ವಾಮಿ ದೇವಾಲಯವಿದ್ದು, ಇಲ್ಲಿನ ಶಾಲೆಯಲ್ಲಿ ಸರ್ಕಾರಿ ಯೋಜನೆಯನ್ವಯ ಮೊಟ್ಟೆ ವಿತರಿಸುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣ ಮುಂದಿಟ್ಟು ಈ ವಿದ್ಯಾರ್ಥಿಗಳ ಪೋಷಕರು ಮಕ್ಕಳನ್ನು
ಶಾಲೆ ಬಿಡಿಸಿ ವರ್ಗಾವಣೆ ಪಡೆದುಕೊಂಡಿದ್ದಾರೆ.
ಇದೇ ಧಾರ್ಮಿಕ ಭಾವನೆ ಮುಂದಿಟ್ಟು ಮೊಟ್ಟೆಯ ಬದಲು ವಿದ್ಯಾರ್ಥಿಗಳಿಗೆ ಬಾಳೆಹಣ್ಣು ವಿತರಿಸಬೇಕೆಂದು ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದರು. ಈಗ ಶಾಲಾ ಆಡಳಿತ ಮಂಡಳಿ ಈ ನಿರ್ಧಾರವನ್ನು ಧಿಕ್ಕರಿಸಿ ಶಾಲೆಯಲ್ಲಿ ಮೊಟ್ಟೆ ವಿತರಿಸುತ್ತಿದೆ. ಹೀಗಾಗಿ ಮಕ್ಕಳು ಶಾಲೆ ತೊರೆದಿದ್ದಾರೆಂದು ಗ್ರಾಮದ ಮುಖಂಡ ಅಭಿನಂದನ್ ಪಟೇಲ್ ವಿವರಿಸಿದ್ದಾರೆ.
ಕೆಲ ದಿನಗಳ ಹಿಂದೆ, ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೋಷಕರು ಮೊಟ್ಟೆ ವಿತರಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶದಂತೆ ಶಾಲಾ ಆಡಳಿತ ಮಂಡಳಿ ಕ್ರಮ ತೆಗೆದುಕೊಂಡಿತ್ತು. ಇದರ ಪರಿಣಾಮವಾಗಿ ಮೊಟ್ಟೆ ತಿನ್ನದ ಹಿನ್ನೆಲೆಯ ಪೋಷಕರು ಶಾಲೆಯಿಂದ ತಮ್ಮ ಮಕ್ಕಳ ಟಿಸಿ ಪಡೆದುಕೊಂಡು, ಬೇರೆ ಶಾಲೆಗೆ ದಾಖಲಿಸಿದ್ದಾರೆ.
ಮೈಸೂರಿಗರಿಗೆ ಗುಡ್‌ನ್ಯೂಸ್ | ಇಂದು ಬೃಹತ್ ಉದ್ಯೋಗ ಮೇಳ: 100ಕ್ಕೂ ಹೆಚ್ಚು ಕಂಪನಿ ಭಾಗಿ; ಇಲ್ಲಿದೆ ಸಂಪೂರ್ಣ ವಿವರ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


