ಹೊಸದಿಲ್ಲಿ: ತನ್ನನ್ನು ತಾನೇ ದೇವಮಾನವ ಎಂದು ಘೋಷಿಸಿಕೊಂಡಿದ್ದ ಆಶ್ರಮವೊಂದರ ಸ್ವಾಮೀಜಿ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದ್ದು, ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಯಂ ಘೋಷಿತ ದೇವ ಮಾನವ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸಾರಥಿ ವಿರುದ್ಧ ಆಶ್ರಮದ ವಿದ್ಯಾರ್ಥಿನಿಯರೇ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ.
ಶ್ರೀ ಶಾರದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಇಡಬ್ಲ್ಯೂಎಸ್ ವಿದ್ಯಾರ್ಥಿ ವೇತನದಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಈ ಪೈಕಿ 17 ವಿದ್ಯಾರ್ಥಿನಿಯರು ಸ್ವಯಂ ಘೋಷಿತ ದೇವ ಮಾನವ ಚೈತನ್ಯಾನಂದ ಸರಸ್ವತಿ ಅಸಭ್ಯ ಪದ ಬಳಸಿದ್ದಾನೆ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ ಹಾಗೂ ದೈಹಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಿಕೊಂಡು ದೂರಿದ್ದಾರೆ.
ಇನ್ನು ಆಗಸ್ಟ್ 4ರಂದೇ ಈ ಕುರಿತು ಪ್ರಕರಣದ ದಾಖಲಾಗಿದ್ದು, ಕಾಮಿ ಸ್ವಾಮೀಜಿ ಮಾತ್ರವಲ್ಲದೇ ಸಂಸ್ಥೆಯ ಕೆಲ ಅಧ್ಯಾಪಕರು ಹಾಗೂ ಆಡಳಿತ ವಿಭಾಗದ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿನಿಯರ ಮೇಲೆ ಅನಗತ್ಯ ಒತ್ತಡ ಹೇರಿದ ಆರೋಪ ಕೇಳಿಬಂದಿದೆ.
ಈ ತನಿಖೆ ಕೈಗೊಂಡ ಪೊಲೀಸರಿಗೆ ನೆಲ ಮಾಳಿಗೆಯಲ್ಲಿ ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್ ಹೊಂದಿದ್ದ ವೋಲ್ವೋ ಕಾರು ಸಹ ಲಭ್ಯವಾಗಿದ್ದು, ಆಗಸ್ಟ್ 25ರಂದು ಈ ಸಂಬಂಧ ಮತ್ತೊಂದು ಎಫ್‌ಐಆರ್ ಅನ್ನು ದಾಖಲಿಸಿ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅತ್ತ ಆರೋಪಿ ಚೈತನ್ಯಾನಂದ ಸ್ವಾಮೀಜಿ ಆರೋಪ ಕೇಳಿಬಂದ ಕೂಡಲೇ ತಲೆ ಮರೆಸಿಕೊಂಡಿದ್ದಾನೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


