ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದ್ದು, ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಾಣುವ ಮೂಲಕ ಸರಣಿಯನ್ನು ಕೈಚೆಲ್ಲಿದೆ.
ಇನ್ನು ಈ ಎರಡೂ ಪಂದ್ಯಗಳಲ್ಲಿ ಭಾರತ ಸೋತಿದ್ದು ಮಾತ್ರವಲ್ಲದೇ ವಿರಾಟ್ ಕೊಹ್ಲಿ ಫ್ಲಾಪ್ ಆಗಿದ್ದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಪಾಲಿಗೆ ಬೇಸರವನ್ನು ತಂದೊಡ್ಡಿದೆ.
ಹೌದು, ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ವಿರಾಟ್ ಕೊಹ್ಲಿ, ನಿನ್ನೆ ( ಅಕ್ಟೋಬರ್ 23 ) ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲೂ ಸಹ ಡಕ್‌ಔಟ್ ಆದರು. ಹೀಗೆ ಸತತ 2 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಡಕ್‌ಔಟ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳು ಆರಂಭವಾಗಿದ್ದು, ಕೊಹ್ಲಿ ನಿವೃತ್ತಿಯ ಚರ್ಚೆಗಳೂ ಸಹ ಏರ್ಪಟ್ಟಿವೆ.
ಟೀಕಾಕಾರರು ಸತತವಾಗಿ ವಿಫಲವಾಗುತ್ತಿದ್ದರೂ ಇನ್ನೂ ಆಡುವ ಹಂಬಲವೇಕೆ? ಇತರೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ ನಿವೃತ್ತಿ ತೆಗೆದುಕೊಳ್ಳಿ ಎಂಬ ಸಲಹೆಗಳೂ ಸಹ ಕೇಳಿಬಂದಿವೆ. ಇಂತಹ ಸಂದರ್ಭದಲ್ಲೇ ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಡಿರುವ ಟ್ವೀಟ್ ಒಂದು ವಿವಾದಕ್ಕೀಡಾಗಿದೆ.
ಅಶ್ವಿನ್ ನಿನ್ನೆ ʼಜಸ್ಟ್ ಲೀವ್ ಇಟ್ʼ ಎಂಬ ಟ್ವೀಟ್ ಹಂಚಿಕೊಂಡಿದ್ದು, ಇದು ವಿರಾಟ್ ಕೊಹ್ಲಿಯ ಕಳಪೆ ಆಟಕ್ಕೆ ಬಳಸಿರುವ ಟ್ವೀಟ್, ಹೀಗೆ ಆಡುವ ಬದಲು ಕ್ರಿಕೆಟ್‌ಗೆ ನಿವೃತ್ತಿ ಕೊಟ್ಟು ಕ್ರಿಕೆಟ್ ಬಿಟ್ಟುಬಿಡಿ ಎಂದು ಅಶ್ವಿನ್ ಹೇಳಿದ್ದಾರೆ ಎಂದು ಹಲವರು ಬರೆದುಕೊಂಡಿದ್ದಾರೆ.
ಆದರೆ ಅಸಲಿಯತ್ತಿಗೆ ಅಶ್ವಿನ್ ಮಾಡಿರುವ ಈ ಟ್ವೀಟ್ 2022ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಾವು ವೈಡ್ ಎಸೆತವನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಿದ್ದರ ಕುರಿತು. ಹೌದು, ನಿನ್ನೆಗೆ 2022ರಲ್ಲಿ ಭಾರತ ಹಾಗೂ ಪಾಕ್ ನಡುವೆ ನಡೆದಿದ್ದ ಪಂದ್ಯ ನಡೆದು 3 ವರ್ಷಗಳು. ಈ ಸಲುವಾಗಿ ಅಶ್ವಿನ್ ಈ ಟ್ವೀಟ್ ಹಂಚಿಕೊಂಡಿದ್ದಾರೆ.
ಪಾಕ್ ನೀಡಿದ್ದ 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ 19.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ದಾಖಲಿಸಿತ್ತು. ಈ ಸಮಯದಲ್ಲಿ ಗೆಲ್ಲಲು 1 ಎಸೆತದಲ್ಲಿ 2 ರನ್ ಬೇಕಿದ್ದಾಗ ಸ್ಟ್ರೈಕ್‌ನಲ್ಲಿದ್ದ ಅಶ್ವಿನ್ ವೈಡ್ ಆಗುತ್ತಿದ್ದ ಎಸೆತವನ್ನು ಬಾರಿಸಲು ಯತ್ನಿಸದೇ ಜಾಣ್ಮೆಯಿಂದ ಬಿಟ್ಟು ಒಂದು ರನ್ ದೊರಕುವಂತೆ ಮಾಡಿದ್ದರು. ನಂತರ ಒಂದು ರನ್ ಬಾರಿಸಿ ಪಂದ್ಯ ಗೆಲ್ಲಿಸಿದ್ದರು. ಹೀಗಾಗಿ ಆ ಗಳಿಗೆಯನ್ನು ನೆನೆಯಲು ಅಶ್ವಿನ್ ಈ ರೀತಿ ಜಸ್ಟ್ ಲೀವ್ ಇಟ್ ಎಂಬ ಟ್ವೀಟ್ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


