ಮಂಡ್ಯ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದು, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಕ್ಕಾಡೆ ಮಲಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಪಿವೈ ಪತ್ನಿ ಶೀಲಾ ಅವರಿಂದು ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.
ಚುನಾವಣೆ ನಡೆಯುವುದಕ್ಕಿಂತಲೂ ಮುಂಚೆ ದೇವಾಲಯಕ್ಕೆ ಭೇಟಿ ನೀಡಿದ್ದ ಶೀಲಾ ಅವರು ಯೋಗೇಶ್ವರ್ ಗೆಲುವಿಗಾಗಿ ಹರಕೆ ಕಟ್ಟಿಕೊಂಡಿದ್ದರು.
ಅದರಂತೆ ಇಂದು ದೇವಸ್ಥಾನಕ್ಕೆ ಬಂದು ಹೊಳೆ ಆಂಜನೇಯನಿಗೆ ಒಂದೂಕೂಲು ರೂಪಾಯಿ ಕಟ್ಟಿ ಹರಕೆ ತೀರಿಸಿದ್ದಾರೆ. ಬಳಿಕ ದೀಪ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶೀಲಾಗೆ ಶಾಸಕ ಉದಯ್ ಪತ್ನಿ ವಿನೂತನ ಸಾಥ್ ನೀಡಿದರು.
ಪೂಜೆ ಬಳಿಕ ಮಾತನಾಡಿದ ಶೀಲಾ ಯೋಗೇಶ್ವರ್ ಅವರು, ಕಷ್ಟದ ಸಂದರ್ಭದಲ್ಲಿ ಮಾತೃ ಪಕ್ಷ ಕೈಹಿಡಿಯಿತು. ಚನ್ನಪಟ್ಟಣ ಜನರ ಆಶೀರ್ವಾದದಿಂದ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ. ನನ್ನ ಪತಿಯ ಜನ್ಮಭೂಮಿ ಹಾಗೂ ಕರ್ಮಭೂಮಿ ಚನ್ನಪಟ್ಟಣ ಎಂದು ಭಾವುಕರಾಗಿದ್ದಾರೆ.
ನಾವು ಸಾಮಾನ್ಯ ಕುಟುಂಬದಿಂದ ಬಂದವರು. ಪತಿಯ ಜನಸೇವೆ ಗುರುತಿಸಿ ಜನ ಕೈಹಿಡಿದಿದ್ದಾರೆ. ಎರಡು ಸರಿ ಸೋಲು ಅನುಭವಿಸಿದ್ವಿ. ಈ ಬಾರಿ ಭರವಸೆ ಇತ್ತು. ಚನ್ನಪಟ್ಟಣ ಜನ ತಮ್ಮ ಮನೆ ಮಗನನ್ನು ಗೆಲ್ಲಿಸಿದ್ದಾರೆ. ನಮ್ಮದೇ ಸರ್ಕಾರ ಇರುವುದರಿಂದ ಜನ ಸೇವೆ ಮಾಡಬಹುದು. ಸಾಕಷ್ಟು ಅಭಿವೃದ್ಧಿ ಬಗ್ಗೆ ಜನರ ನಿರೀಕ್ಷೆ ಇದೆ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


