ಬೆಂಗಳೂರು: ವಕ್ಪ್ ನೋಟೀಸ್ ವಿರುದ್ಧ ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಾಳೆಯಿಂದ ( ನವೆಂಬರ್ 25 ) ಆರಂಭವಾಗಲಿರುವ ಜಾಗೃತಿ ಅಭಿಯಾನದಿಂದ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಬಣ ದೂರ ಉಳಿಯಲಿದೆ.
ಮೊದಲೇ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿರುವ ಬಿಜೆಪಿಯಲ್ಲಿ ಈ ಬೆಳವಣಿಗೆ ಮತ್ತಷ್ಟು ಬಣ ಬಡಿದಾಟಕ್ಕೆ ಪುಷ್ಟಿ ನೀಡಿದಂತಾಗಿದೆ.
ಯತ್ನಾಳ್ ನೇತ್ರತ್ವದಲ್ಲಿ ನಡೆಯಲಿರುವ ಜಾಗೃತಿ ಅಭಿಯಾನಕ್ಕೆ ಪಕ್ಷದ ಯಾವುದೇ ಶಾಸಕರು, ಸಂಸದರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಯಾರೊಬ್ಬರೂ ಪಾಲ್ಗೊಳ್ಳಬಾರದು ಎಂದು ವಿಜಯೇಂದ್ರ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ವರಿಷ್ಟರ ಅನುಮತಿ ಪಡೆಯದೇ, ಪಕ್ಷದ ಚಿಹ್ನೆಯನ್ನು ಬಳಸದೆ ಒಬ್ಬ ವ್ಯಕ್ತಿಯ ಪ್ರತಿಷ್ಟೆಗಾಗಿ ನಡೆಸಲು ಮುಂದಾಗಿರುವ ಈ ಅಭಿಯಾನದಿಂದ ದೂರ ಉಳಿಯುವಂತೆ ಸೂಚನೆ ಕೊಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ವಕ್ಫ್ ವಿರುದ್ಧ ಹೋರಾಟ ಹಮ್ಮಿಕೊಂಡರೆ, ಯತ್ನಾಳ್ ಟೀಂ ಪ್ರತ್ಯೇಕ ಹೋರಾಟ ಹಮ್ಮಿಕೊಂಡಿದೆ. ಯತ್ನಾಳ್ ಟೀಂ ಬೀದರ್ ನಿಂದ ಚಾಮರಾಜನಗರದವರೆಗೆ ಹೋರಾಟ ಜಾಥಾ ಹಮ್ಮಿಕೊಂಡಿದೆ.
ಈ ನಡುವೆ 3 ತಂಡವಾಗಿ ವಕ್ಫ್ ವಿರುದ್ಧ ಬಿವೈ ವಿಜಯೇಂದ್ರ ತಂಡ ಜಾಗೃತಿ ಹೋರಾಟ ಹಮ್ಮಿಕೊಂಡಿದೆ. ಒಂದೇ ವಿಚಾರವಾಗಿ ಪಕ್ಷದಲ್ಲಿ ನಡೆಯುವ ಎರಡು ತಂಡಗಳ ಹೋರಾಟ ಸಾರ್ವಜನಿಕವಾಗಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಗಡಿಜಿಲ್ಲೆ ಬೀದರ್‌ನಲ್ಲಿ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ಹೋರಾಟ ಆರಂಭವಾಗಲಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ತಂಡಕ್ಕೆ ಸ್ಥಳೀಯ ಬಿಜೆಪಿ ಶಾಸಕರ ಬೆಂಬಲ ಸಿಗುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಶಾಸಕರಾದ ಶರಣು ಸಲಗರ್, ಶೈಲೇಂದ್ರ ಬೆಲ್ದಾಳೆ, ಪ್ರಭು ಚೌಹಾಣ್ ಪ್ರತಿಭಟನೆಯಲ್ಲಿ ಭಾಗಿಯಾಗದೆ ದೂರ ಉಳಿಯಲಿದ್ದಾರೆ.
ಏಕೆಂದರೆ, ಈ ಮೂವರು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಯತ್ನಾಳ್ ನೇತೃತ್ವದ ಹೋರಾಟಕ್ಕೆ ಬೆಂಬಲ ನೀಡುವುದು ಬಹುತೇಕ ಅನುಮಾನ ಎಂದೇ ಹೇಳಲಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಬಸವಕಲ್ಯಾಣ ಶಾಸಕ ಶರಣು ಸಲಗರ್ ಹೇಳಿಕೆ ನೀಡಿದ್ದು, ನಾವು ಈಗಾಗಲೇ ಈ ಹೋರಾಟ ಮುಗಿಸಿ ಬಂದಿದ್ದೇವೆ. ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಸೂಚನೆ ಮೇರೆಗೆ ನಾನು ಹೋಗುತ್ತೇನೆ. ಏಕೆಂದರೆ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಅಲ್ಲದೇ, ವಿಜಯೇಂದ್ರ ವಿರುದ್ಧದ ಯತ್ನಾಳ್ ಹೇಳಿಕೆಗೆ ಬಸವಕಲ್ಯಾಣ ಶಾಸಕ ಶರಣು ಸಲಗರ್ ಕಿಡಿಕಾರಿದ್ದಾರೆ.
ವಿಜಯೇಂದ್ರ ಮಾಡಿರುವ ಮೂರು ತಂಡಕ್ಕೆ ಅಪ್ಪ-ಅಮ್ಮ ಇಲ್ಲವೆಂಬ ಯತ್ನಾಳ್ ಹೇಳಿಕೆಗೆ ಕೌಂಟರ್ ಕೊಟ್ಟಿರುವ ಸಲಗರ್, ಬಸನಗೌಡ ಪಾಟೀಲ್ ಯತ್ನಾಳ್ ತಂಡ ಅನಾಥವಾಗಿದೆ. ಮಾಜಿ ಎಂಎಲ್‌ಸಿ, ಮಾಜಿ ಎಂಪಿ ಹಾಗೂ ಮನೆಯಲ್ಲಿ ಕುಳಿತುಕೊಂಡವರನ್ನ ಸೇರಿಸಿಕೊಂಡಿದ್ದಾರೆ. ಹೀಗಾಗಿ, ಈ ತಂಡಕ್ಕೆ ತಾಯಿ-ತಂದೆ ಯಾರು ಇಲ್ಲ. ನಮಗೆ ನಿಜವಾಗಿಯೂ ತಂದೆ-ತಾಯಿಗಳಿದ್ದಾರೆ. ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ ಸೇರಿ ಹಲವರ ವಿರುದ್ಧ ಕಿಡಿಕಾರಿದ್ದಾರೆ. ಯತ್ನಾಳ್ ಅವರೇ ನಿಮ್ಮ ನಡೆ ಜನರಿಗೆ ದಾರಿ ತಪ್ಪಿಸುತ್ತಿದೆ. ಈ ರೀತಿಯ ಸಂಶಯದಿಂದಾಗಿಯೇ ಮೂರು ಕಡೆ ಸೋಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


