ಕರ್ನಾಟಕ ರಾಜ್ಯಕ್ಕೆ ಯುಗಾದಿ ಹಬ್ಬಕ್ಕೆ ಬಂಪರ್ ಕೊಡುಗೆ ಸಿಗಲಿದೆ. ಕಲ್ಯಾಣ ಕರ್ನಾಟಕ ಭಾಗದ ವಿಮಾನ ನಿಲ್ದಾಣವೊಂದು ಕಾರ್ಯಾಚರಣೆಯನ್ನು ಮಾಡಲಿದೆ. ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ‘ಜಗಜ್ಯೋತಿ ಶ್ರೀ ಬಸವೇಶ್ವರ ವಿಮಾನ ನಿಲ್ದಾಣ’ ಲೋಕಾರ್ಪಣೆಯಾಗಲಿದೆ.
ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, “ರಾಜ್ಯದ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಇದ್ದ ಅಡೆತಡೆ ನಿವಾರಣೆಯಾಗಿದ್ದು, ಯುಗಾದಿ ವೇಳೆಗೆ ಕಾರ್ಯಾರಂಭ ಮಾಡುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿತ್ತು. ಆದರೆ ಪರಿಸರ ಸಂಬಂಧಿತ ಪ್ರಕರಣಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದ್ದ ಕಾರಣ ಪ್ರಕ್ರಿಯೆ ಸ್ಥಗಿತವಾಗಿತ್ತು. ಸಚಿವ ಎಂ.ಬಿ.ಪಾಟೀಲ್ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಈ ಕುರಿತು ವಾದ ಮಂಡಿಸಲು ನೇಮಕ ಮಾಡುವ ಮೂಲಕ ಪ್ರಕ್ರಿಯೆಗಳನ್ನು ಬೇಗ ಪೂರ್ಣಗೊಳಿಸಲು ಶ್ರಮವಹಿಸಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾ ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನದ 2 ಅಗ್ನಿಶಾಮಕ ವಾಹನಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದರ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಹೊಸ ಸೌಲಭ್ಯದಿಂದ ವಿಮಾನ ನಿಲ್ದಾಣದ ಭದ್ರತಾ ಸಾಮರ್ಥ್ಯ ಮತ್ತಷ್ಟು ಬಲಗೊಂಡಿದೆ ಮತ್ತು ವಿಮಾನ ನಿಲ್ದಾಣ ಉದ್ಘಾಟನೆಯತ್ತ ಮತ್ತೊಂದು ಹೆಜ್ಜೆ ಮುಂದೆ ಇರಿಸಿದಂತಾಗಿದೆ. ಪರಿಸರ ಸಂಬಂಧಿ ಅನುಮತಿ ಮಾತ್ರ ಬಾಕಿ ಇದ್ದು, ಅದು ಸಿಕ್ಕರೆ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಲಿದೆ.
ಕರ್ನಾಟಕ ಸರ್ಕಾರ ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ 618.75 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದರಿಂದಾಗಿ ಸಣ್ಣ ವಿಮಾನಗಳು ಮಾತ್ರವಲ್ಲ, ಬೃಹತ್ ವಿಮಾನದ ಕಾರ್ಯಾಚರಣೆ ಮತ್ತು ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಹಲವು ಗಡುವು: 2023ರಲ್ಲಿಯೇ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಯಾಗಬೇಕಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದ ಜೊತೆಗೆ ವಿಜಯಪುರ ನಿಲ್ದಾಣ ಉದ್ಘಾಟನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ವಿವಿಧ ಕಾರಣಕ್ಕೆ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಗಡುವು ಮುಂದಕ್ಕೆ ಹೋಗುತ್ತಲೇ ಇದೆ.
ವಿಜಯಪುರ ಹೊರವಲಯದ ಮದಗಾವಿ ಗ್ರಾಮದ ಬಳಿಕ ವಿಮಾನ ನಿಲ್ದಾಣವನ್ನು ಸುಮಾರು 727 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ವಿಜಯಪುರದ ಜನರು ವಿಮಾನಕ್ಕಾಗಿ ಬೆಳಗಾವಿ ಅಥವ ಹುಬ್ಬಳ್ಳಿಗೆ ಬರಬೇಕಿದೆ. ಇವು ಸುಮಾರು 200 ಕಿ.ಮೀ. ದೂರದಲ್ಲಿದೆ.
ಆದ್ದರಿಂದ ಸರ್ಕಾರ 2007ರಲ್ಲಿ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಅನುಮೋದನೆ ನೀಡಿತ್ತು. ಆದರೆ ವಿವಿಧ ಕಾರಣಕ್ಕೆ ಯೋಜನೆ ವೇಗ ಪಡೆಯಲಿಲ್ಲ. 2020ರಲ್ಲಿ ಯೋಜನೆಗೆ ವೇಗ ನೀಡಲಾಯಿತು. 2024ರಲ್ಲಿ ಲೋಕಾರ್ಪಣೆ ಮಾಡುವ ಗುರಿಯನ್ನು ಸಹ ಹಾಕಿಕೊಳ್ಳಲಾಗಿತ್ತು.
ವಿಜಯಪುರ ವಿಮಾನ ನಿಲ್ದಾಣವನ್ನು ಎಎಐಗೆ ಹಸ್ತಾಂತರ ಮಾಡಲು ಬದಲು ಕರ್ನಾಟಕ ಸರ್ಕಾರವೇ ನಿರ್ವಹಣೆ ಮಾಡಲು ಮುಂದಾಗಿದೆ. ಈಗಾಗಲೇ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ವಿಜಯಪುರ ವಿಮಾನ ನಿಲ್ದಾಣ ನಿರ್ವಹಣೆ ಸಹ ರಾಜ್ಯದ ಕೈಯಲ್ಲಿಯೇ ಇರಲಿದೆ.
ವಿಜಯಪುರ ನಗರದಿಂದ ವಿಮಾನ ನಿಲ್ದಾಣ ಸುಮಾರು 15 ಕಿ.ಮೀ.ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಗೆ ವಿಮಾನ ನಿಲ್ದಾಣ ಸಂಪರ್ಕಿಸಲು ರಸ್ತೆಯನ್ನು ಸಹ ನಿರ್ಮಾಣ ಮಾಡಲಾಗಿದೆ. ಮೊದಲು ವಿಮಾನ ನಿಲ್ದಾಣಕ್ಕೆ 384 ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿತ್ತು. ಆದರೆ ಕರ್ನಾಟಕ ಸರ್ಕಾರ ಬಳಿಕ 618 ಕೋಟಿ ರೂ. ಮೊತ್ತದ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿತ್ತು.
ವಿಜಯಪುರ ವಿಮಾನ ನಿಲ್ದಾಣದಿಂದ ಜಿಲ್ಲೆಯ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ, ವಾಣಿಜ್ಯ ವಹಿವಾಟು ಹೆಚ್ಚಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಅಲ್ಲದೇ ಜಿಲ್ಲೆಯ ಜನರು ಬೆಂಗಳೂರು ಸೇರಿದಂತೆ ವಿವಿಧ ನಗರಕ್ಕೆ ಸುಲಭವಾಗಿ ಸಂಚಾರ ನಡೆಸಲು ಅನುಕೂಲವಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


