ಬೆಂಗಳೂರು: ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧದ ಪಶ್ಚಿಮದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ಭುವನೇಶ್ವರಿ ಕಂಚಿನ ಪ್ರತಿಮೆ ಜನವರಿ.27ರಂದು ಅನಾವರಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನವರಿ.27ರಂದು ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಪ್ರತಿ ದಿನವೂ ಭುವನೇಶ್ವರಿಗೆ ಅರ್ಚನೆ ನಡೆಯಲಿದೆ ಎಂದರು.
ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ, ಕದಂಬ ಲಾಂಛನ ಹಾಗೂ ವೈಜಯಂತಿ ಮಾಲೆ, ಕಂಠಿಹಾರ, ಗಂಡಭೇರುಂಡ ಇರಲಿದೆ ಎಂದು ವಿವರಣೆ ನೀಡಿದರು.
ಪ್ರತಿಮೆಯ ಸುತ್ತಲೂ ಉದ್ಯಾನವನ, ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮದ ದ್ವಾರಕ್ಕೆ ಇರುವ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆಂದೇ ಪಶ್ಚಿಮಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಇರಲಿದೆ ಎಂದು ತಿಳಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


