ನಿನ್ನೆ (ಫೆಬ್ರವರಿ 24) ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆರನೇ ಪಂದ್ಯ ಮುಕ್ತಾಯವಾಗಿದ್ದು, ಪಂದ್ಯದಲ್ಲಿ ನ್ಯೂಜಿಲೆಂಡ್ ಬಾಂಗ್ಲಾದೇಶದ ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.
ಈ ಮೂಲಕ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿದ ಎರಡೂ ಪಂದ್ಯಗಳಲ್ಲೂ ಗೆದ್ದ ಎ ಗುಂಪಿನ ಭಾರತ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿವೆ. ಅತ್ತ ಇದೇ ಗುಂಪಿನ ಮತ್ತೆರಡು ತಂಡಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿವೆ.
ಹೀಗೆ ಭಾರತ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದ್ದು, ಯಾವ ದಿನದಂದು ಯಾವ ತಂಡಗಳ ವಿರುದ್ಧ ಸೆಮಿಫೈನಲ್ ಪಂದ್ಯ ಜರುಗಲಿದೆ ಎಂಬ ಪ್ರಶ್ನೆ ಎದ್ದಿವೆ.
ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ ಬಿ ಗುಂಪಿನ ಪಂದ್ಯಗಳು ನಡೆಯಬೇಕು ಹಾಗೂ ಮುಖ್ಯವಾಗಿ ಮಾರ್ಚ್ 2ರಂದು ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ಪಂದ್ಯ ಮುಗಿಯಬೇಕು. ಹೌದು, ಸದ್ಯ ಎರಡೂ ತಂಡಗಳು ಸಮನಾಗಿ ನಾಲ್ಕು ಅಂಕ ಪಡೆದಿವೆ. ನ್ಯೂಜಿಲೆಂಡ್ ಸದ್ಯ ಅಗ್ರಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಭಾನುವಾರ ಇತ್ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
ಹೀಗೆ ಇತ್ತಂಡಗಳಲ್ಲಿ ಯಾವ ತಂಡ ಭಾನುವಾರ ಗೆಲ್ಲಲಿದೆಯೋ ಆ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳಲಿದ್ದು, ಮಾರ್ಚ್ 4ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ಹಣಾಹಣಿಯಲ್ಲಿ ಸೋಲುವ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲಿದ್ದು, ಎರಡನೇ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದ್ದು, ಈ ಪಂದ್ಯದಲ್ಲಿ ಮಾರ್ಚ್ 5ರಂದು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


