ಮೊನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಇನ್ನು ಈ ಪಂದ್ಯದಲ್ಲಿ ಸೋತ ಪಾಕಿಸ್ತಾನ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನವೇ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿದೆ.
ಹೌದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಮೊನ್ನೆ ಭಾರತದ ವಿರುದ್ಧವೂ ಸೋತ ಕಾರಣ ಟೂರ್ನಿಯಿಂದ ಹೊರಬಿದ್ದಿದೆ.
ಇನ್ನು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕ್ ಆಟಗಾರರು ತೋರಿದ ಪ್ರದರ್ಶನದ ಕುರಿತು ಪಾಕ್ ಕ್ರಿಕೆಟ್ ಪ್ರೇಮಿಗಳು ಹಾಗೂ ಮಾಜಿ ಕ್ರಿಕೆಟಿಗರು ಬೇಸರ ಹೊರಹಾಕುತ್ತಿದ್ದಾರೆ.
ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಸಹ ಪಾಕ್ ಸೋಲಿನ ಕುರಿತು ಮಾತನಾಡಿದ್ದು, ಪಂದ್ಯದಲ್ಲಿ ಅನಗತ್ಯ ಸೆಲೆಬ್ರೇಷನ್ ಮಾಡಿದ ಅಬ್ರಾರ್ ವಿರುದ್ಧ ಕಿಡಿಕಾರಿದ್ದಾರೆ. ಹೌದು, ಪಂದ್ಯದ ವೇಳೆ ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಅಬ್ರಾರ್ ಸ್ಥಳದಲ್ಲಿಯೇ ಕೈಕಟ್ಟಿ ಗಿಲ್ ಕಡೆ ವಿಚಿತ್ರ ಲುಕ್ ಕೊಟ್ಟಿದ್ದರು. ಪಾಕ್ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿದ್ದ ಸಂದರ್ಭದಲ್ಲಿಯೂ ಈ ರೀತಿಯ ಸೆಲೆಬ್ರೇಷನ್ ಮಾಡಿದ ಅಬ್ರಾರ್ ಪಂದ್ಯ ಸೋತ ಬಳಿಕ ಹೀನಾಯವಾಗಿ ಟ್ರೋಲ್ ಆದರು.
ಈ ಕುರಿತು ವಾಸಿಂ ಅಕ್ರಂ “ನನಗೆ ಆ ಎಸೆತ ಇಷ್ಟವಾಯಿತು, ಆದರೆ ಆ ಸೆಲೆಬ್ರೇಷನ್ ಇಷ್ಟವಾಗಲಿಲ್ಲ. ಅದಕ್ಕೆಂದೇ ಸಮಯ ಹಾಗೂ ಸ್ಥಳವಿರುತ್ತದೆ. ನೀವು ಗೆಲ್ಲುತ್ತಿದ್ದರೆ ಸಂಭ್ರಮಿಸಿ. ನಿನ್ನ ತಂಡ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ ಎಂದು ನಿನಗೆ ಗೊತ್ತು. ಆ ಸಂದರ್ಭದಲ್ಲಿ ವಿಕೆಟ್ ಪಡೆದುಕೊಂಡರೆ ಸೌಮ್ಯವಾಗಿರಬೇಕು. ಆದರೆ ಅದು ಆಗಲಿಲ್ಲ. ಅದನ್ನು ಅವನಿಗೆ ಹೇಳುವವರು ಯಾರೂ ಇಲ್ಲ” ಎಂದು ಕಿಡಿಕಾರಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


