ಅಹ್ಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 67ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 83 ರನ್‌ಗಳ ಬೃಹತ್ ಗೆಲುವನ್ನು ಕಂಡು ಟೂರ್ನಿಯಲ್ಲಿ ನಾಲ್ಕನೇ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಡಿವಾನ್ ಕಾನ್ವೆ ಹಾಗೂ ಡಿವಾಲ್ಡ್ ಬ್ರೆವಿಸ್ ಅಬ್ಬರದ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 230 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ 231 ರನ್‌ಗಳ ಗುರಿಯನ್ನು ನೀಡಿತ್ತು. ಬೌಲಿಂಗ್‌ನಲ್ಲಿ ಎಡವಿದ್ದ ಗುಜರಾತ್ ಟೈಟನ್ಸ್ ಬ್ಯಾಟಿಂಗ್‌ನಲ್ಲೂ ಸಹ ಮಕಾಡೆ ಮಲಗಿದ್ದು, 18.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಆಯಷ್ ಮ್ಹಾತ್ರೆ ಹಾಗೂ ಡಿವಾನ್ ಕಾನ್ವೆ ಅಬ್ಬರಿಸಿ ಉತ್ತಮ ಆರಂಭ ನೀಡಿದರು. ಮ್ಹಾತ್ರೆ 34 (17) ರನ್ ಗಳಿಸಿದರೆ, ಡಿವಾನ್ ಕಾನ್ವೆ 52 (35), ಉರ್ವಿಲ್ ಪಟೇಲ್ 37 (19), ಶಿವಮ್ ದುಬೆ 17 (8), ರವೀಂದ್ರ ಜಡೇಜಾ ಅಜೇಯ 21 (18) ರನ್ ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಡಿವಾಲ್ಡ್ ಬ್ರೆವಿಸ್ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 57 ರನ್ ಚಚ್ಚಿದರು.
ಗುಜರಾತ್ ಟೈಟನ್ಸ್ ಪರ ಎಲ್ಲ ಬೌಲರ್‌ಗಳೂ ಸಹ ದುಬಾರಿಯಾದರು. ಆದರೆ ಪ್ರಸಿದ್ಧ್ ಕೃಷ್ಣ 6ಕ್ಕಿಂತ ಕಡಿಮೆ ಎಕಾನಮಿಯಲ್ಲಿ ಎರಡು ವಿಕೆಟ್ ಪಡೆದರೆ, ಸಾಯಿ ಕಿಶೋರ್, ರಶೀದ್ ಖಾನ್ ಹಾಗೂ ಶಾರುಖ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ 41 (28) ಹಾಗೂ ಶುಭ್‌ಮನ್ ಗಿಲ್ 13 (9) ರನ್ ಗಳಿಸಿದರು. ಇನ್ನುಳಿದಂತೆ ಜೋಸ್ ಬಟ್ಲರ್ 5 (7), ಶೆರ್ಫೇನ್ ರುದರ್‌ಫೋರ್ಡ್ ಡಕ್‌ಔಟ್, ಶಾರುಖ್ ಖಾನ್ 19, ರಾಹುಲ್ ತೆವಾಟಿಯಾ 14, ರಶೀದ್ ಖಾನ್ 12, ಗೆರಾಲ್ಡ್ ಕೋಟ್ಜಿ 5, ಅರ್ಷದ್ ಖಾನ್ 20, ಸಾಯಿ ಕಿಶೋರ್ 3 ಹಾಗೂ ಮೊಹಮ್ಮದ್ ಸಿರಾಜ್ ಅಜೇಯ 3 ರನ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಅನ್ಶುಲ್ ಕಾಂಬೋಜ್ ಹಾಗೂ ನೂರ್ ಅಹ್ಮದ್ ತಲಾ 3 ವಿಕೆಟ್, ರವೀಂದ್ರ ಜಡೇಜಾ 2 ವಿಕೆಟ್, ಖಲೀಲ್ ಅಹ್ಮದ್ ಹಾಗೂ ಮಹೀಶ ಪತಿರಾಣಾ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


