ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ತನ್ನ 56ನೇ ಸಭೆಯನ್ನು ಸೆ.3 ಮತ್ತು 4ರಂದು ನವದೆಹಲಿಯಲ್ಲಿ ನಡೆಸಲಿದೆ.
ಸದಸ್ಯರಿಗೆ ಕಳುಹಿಸಲಾದ ನೋಟಿಸ್‍ನ ಪ್ರಕಾರ, ಎರಡೂ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕಲಾಪಗಳು ಪ್ರಾರಂಭವಾಗುತ್ತವೆ. ಮೋದಿಯ ದೀಪಾವಳಿ ಗಿಫ್ಟ್ ಘೋಷಣೆಯ ಬಗ್ಗೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಹೆಚ್ಚುವರಿಯಾಗಿ, ಸೆಪ್ಟೆಂಬರ್.2ರಂದು ರಾಜಧಾನಿಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ. ಅಧಿವೇಶನಗಳ ಕಾರ್ಯಸೂಚಿ, ಸ್ಥಳದ ವಿವರಗಳೊಂದಿಗೆ, ನಂತರದ ದಿನಾಂಕದಲ್ಲಿ ಭಾಗವಹಿಸುವವರಿಗೆ ಹಂಚಿಕೊಳ್ಳಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಇದೀಗ ಶೇ.5, ಶೇ.12, ಶೇ.18 ಮತ್ತು ಶೇ.28- ಹೀಗೆ 4 ಸ್ತರಗಳಲ್ಲಿ ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು 2 ಸ್ತರಗಳಿಗೆ ಇಳಿಸಲು ಸಚಿವಾಲಯ ಶಿಫಾರಸು ಮಾಡಿದೆ ಎಂದಿದೆ. ಅರ್ಥಾತ್ ಈ 4 ಸ್ತರಗಳ ಜಿಎಸ್ಟಿಗಳ ಪೈಕಿ 2 ಸ್ತರಗಳು ರದ್ದಾಗಲಿವೆ.
ಇದೇ ವೇಳೆ ಮಾಹಿತಿ ನೀಡಿರುವ ಮೂಲಗಳು, `ಶೇ.18 ಹಾಗೂ ಶೇ.5 ಸ್ಲ್ಯಾಬ್ ಮಾತ್ರ ಉಳಿವ ಸಾಧ್ಯತೆ ಇದೆ. ಶೇ.12ರ ಸ್ಲ್ಯಾಬ್‍ನಲ್ಲಿರುವ ಶೇ.99 ವಸ್ತುಗಳು ಶೇ.5ರ ಸ್ಲ್ಯಾಬ್‍ಗೆ ಇಳಿಕೆ ಆಗುವ ಸಾಧ್ಯತೆ ಇದೆ. ಶೇ.28ರ ಸ್ಲ್ಯಾಬ್‍ನಲ್ಲಿರುವ ಶೇ.90ರಷ್ಟು ವಸ್ತುಗಳ ಜಿಎಸ್ಟಿ ಶೇ.18ಕ್ಕೆ ಇಳಿಯಲಿದೆ. ಈವರೆಗೆ ಶೇ.28ರಷ್ಟು ಜಿಎಸ್ಟಿಯಲ್ಲಿದ್ದ ಮದ್ಯ, ಸಿಗರೇಟ್‍ನಂಥ ಉತ್ಪನ್ನಕ್ಕೆ (ಸಿನ್ ಗೂಡ್ಸ್) ಶೇ.40ರಷ್ಟು ಜಿಎಸ್ಟಿ ಹಾಕುವ ಯೋಚನೆ ಇದೆ.
ದೀಪಾವಳಿ ವೇಳೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸ್ವರೂಪದಲ್ಲಿ ವ್ಯಾಪಕ ಬದಲಾವಣೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಬದಲಾಗುವ ಪ್ರಸ್ತಾವನೆಗಳಲ್ಲಿ ಸಣ್ಣ ಕಾರುಗಳ ಮೇಲೆ ತೆರಿಗೆಯನ್ನು ಕಡಿತಗೊಳಿಸುವುದೂ ಸೇರಿದೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲೆ ಈಗ ಇರುವ ಶೇ.28ರಷ್ಟು ಜಿಎಸ್‍ಟಿಯನ್ನು ಶೇ.18ಕ್ಕೆ ಇಳಿಸಲು ಸರಕಾರ ಸೂಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾರಿನ ಎಂಜಿನ್ ಸಾಮಥ್ರ್ಯ ಮತ್ತು ಅದರ ಗಾತ್ರವನ್ನು ಆಧರಿಸಿ ತೆರಿಗೆ ಸ್ಪ್ಯಾಬ್ ಬದಲಾಗುತ್ತದೆ. ತೆರಿಗೆ ಕಡಿತದಿಂದ ಸರಕಾರದ ಆದಾಯ ಕೊಂಚ ತಗ್ಗುತ್ತದೆ. ಆದರೆ ಇದು ಸೂಕ್ತ ನಿರ್ಧಾರ, ಇದು ಅಮೆರಿಕದ ಪ್ರತಿಸುಂಕ ಸಮರಕ್ಕೆ ತಕ್ಕ ಉತ್ತರವಾಗಲಿದೆ ಎನ್ನುವುದು ಆಟೋ ಮೊಬೈಲ್ ವಲಯದ ವಿಶ್ವಾಸವಾಗಿದೆ.
ಕಳೆದ ಕೆಲವು ವರ್ಷಗಳಿಂದ 1200 ಸಿಸಿಗಿಂತ ಕಡಿಮೆ ಇರುವ ಪೆಟ್ರೋಲ್ ಚಾಲಿತ ವಾಹನಗಳು ಹಾಗೂ 1500 ಸಿಸಿಗಿಂತಲೂ ಇಡಿಮೆ ಎಂಜಿನ್ ಸಾಮಥ್ರ್ಯವಿರುವ 4 ಮೀಟರ್ ಉದ್ದವನ್ನು ಮೀರದ ಕಾರುಗಳ ಮಾರಾಟ ಪ್ರಮಾಣ ಕಡಿಮೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಮಾರಾಟವಾದ 4.3 ದಶಲಕ್ಷ ಪ್ರಯಾಣಿಕ ವಾಹನಗಳಲ್ಲಿ ಸಣ್ಣ ಕಾರುಗಳ ಪ್ರಮಾಣ ಮೂರನೇ ಒಂದು ಭಾಗದಷ್ಟಿತ್ತು. ಇದು ಕೋವಿಡ್‍ಗಿಂತ ಮೊದಲು ಇದ್ದ ಮಾರಾಟಕ್ಕಿಂತಲು ಶೇ. 50ರಷ್ಟು ಕಡಿಮೆ.
ಜಪಾನ್‍ನ ಸುಜುಕಿ ಮೋಟಾರ್ ಒಡೆತನದ ಮಾರುತಿ ಕಾರ್‍ಗಳ ಮಾರಾಟ ಕೂಡ ಇಳಿಕೆಯಾಗಿದೆ. 2025ನೇ ಹಣಕಾಸು ವರ್ಷದಲ್ಲಿ ಎಸ್‍ಯುವಿ ಮಾರಾಟದಲ್ಲಿ ಶೇ.10.2ರಷ್ಟು ಹೆಚ್ಚಾಗಿದೆ.
ಒಟ್ಟಾರೆ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳ ಪಾಲು ಸತತ 5 ವರ್ಷಗಳಿಂದ ಇಳಿಕೆಯ ಹಾದಿಯಲ್ಲಿದೆ. 2025ನೇ ಹಣಕಾಸು ವರ್ಷದಲ್ಲಿ ಈ ಪ್ರಮಾಣ ಶೇ. 23.4ಕ್ಕೆ ಇಳಿದಿದೆ. ಈ ಹಣಕಾಸು ವರ್ಷದ ಮೊದಲ 4 ತಿಂಗಳಲ್ಲಿ ಇದು ಶೇ. 21ಕ್ಕೆ ಇಳಿದಿದೆ. ಹೀಗಾಗಿ ಸಣ್ಣ ಕಾರುಗಳ ತೆರಿಗೆ ಇಳಿಸುವುದು ಅನಿವಾರ್ಯವೂ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಹಾಗೂ ಹಣಕಾಸು ಸಚಿವಾಲಯದ ಹೇಳಿಕೆಗಳು ದೀಪಾವಳಿ ಹೊತ್ತಿಗೆ ದಿನಬಳಕೆ ವಸ್ತುಗಳ ತೆರಿಗೆ ಭಾರ ಇಳಿಕೆಯಾಗುವ ಸುಳಿವು ನೀಡಿವೆ. ಇದನ್ನು ಉದ್ಯಮ ವಲಯ ಹಾಗೂ ಜನಸಾಮಾನ್ಯರು ಸ್ವಾಗತಿಸಿದ್ದಾರೆ.
ಪೆಟ್ರೋಲ್ ಬಂಕ್‌ನಲ್ಲಿ ಮೋಸ; ಸ್ಥಳದಲ್ಲೇ ರಿಯಾಲಿಟಿ ಚೆಕ್ ಮಾಡಿದ ಗ್ರಾಹಕ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


