ಬೆಂಗಳೂರು: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ಟಿಕೆಟ್ ತ್ಯಾಗ ಮಾಡಿದ್ದ ಅಜ್ಜಂಪಿರ್ ಖಾದ್ರಿಗೆ ಬಂಪರ್ ಕೊಡುಗೆ ನೀಡಿದೆ.
ಫಲಿತಾಂಶ ಪ್ರಕಟಗೊಂಡ ಮೂರೇ ದಿನದಲ್ಲಿ ಅಜ್ಜಂಪಿರ್ ಖಾದ್ರಿ ಅವರನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ( ಹೆಸ್ಕಾಂ) ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಅಜ್ಜಂಪೀರ್ ಖಾದ್ರಿ ಶಿಗ್ಗಾವಿ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ನೀಡಿರಲಿಲ್ಲ.
ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದ ಅಜ್ಜಂಪೀರ್ ಕೊನೆಯ ಗಳಿಗೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಅಲ್ಲದೆ, ಅವರ ಬೆಂಬಲಿಗರು ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಜ್ಜಂಪೀರ್ ಖಾದ್ರಿ ಅವರು ಎಂಎಲ್‌ಸಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಭರವಸೆಯನ್ನು ಕೊಟ್ಟ ಮುಖಂಡರು, ಚುನಾವಣೆಯಲ್ಲಿ ಪಠಾಣ್ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದ್ದರು.
ಎಂಎಲ್‌ಎ ಟಿಕೆಟ್ ಕೈತಪ್ಪಿದ್ದ ಕಾರಣದಿಂದಾಗಿ ಎಂಎಲ್‌ಸಿ ಸ್ಥಾನದ ಆಕಾಂಕ್ಷಿಯಾಗಿದ್ದ ಖಾದ್ರಿ ಸಚಿವ ಜಮೀರ್ ಅಹ್ಮದ್ ಖಾನ್, ಹಿರಿಯ ಕಾಂಗ್ರೆಸ್ ಮುಸ್ಲಿಂ ಮುಖಂಡ ನಸೀರ್ ಅಹ್ಮದ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದೀಗ ಚುನಾವಣೆಯ ಗೆಲವಿನ ಬೆನ್ನಲ್ಲೇ ಬೆಂಗಳೂರಿನಲ್ಲಿ ಠೀಕಾಣಿ ಹೂಡಿ ನಾಯಕರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಖಾದ್ರಿಗೆ ಎಂಎಲ್‌ಸಿ ಸ್ಥಾನದ ಬದಲಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಈ ಮೂಲಕ ಶಿಗ್ಗಾವಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆದ ಗೆಲುವಿನ ಹಿನ್ನೆಲೆಯಲ್ಲಿ ಗಿಫ್ಟ್ ಖಾದ್ರಿಗೆ ಸಿಕ್ಕಂತಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


