ಬೆಂಗಳೂರು: ರಾಜ್ಯಾದ್ಯಂತ ತೀವ್ರ ಗೊಂದಲ ಸೃಷ್ಟಿಸಿರುವ ಬೆನ್ನಲ್ಲೇ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಇಂದು ( ನವೆಂಬರ್ 25 ) ಪಡಿತರ ಚೀಟಿಗಳ ಪರಿಷ್ಕರಣೆ ಹಾಗೂ ತಿದ್ದುಪಡಿಗೆ ಚಾಲನೆ ನೀಡಿದೆ.
ಅರ್ಹರನ್ನು ಹೊರತುಪಡಿಸಿ ಅನರ್ಹರನ್ನು ತೆಗೆದುಹಾಕುವುದು, ಕೆಲವು ಕಾರಣಗಳಿಂದ ರದ್ದಾಗಿರುವ ಬಿಪಿಎಲ್ ಕಾಡ್೯ಗಳ ತಿದ್ದುಪಡಿ ಕಾರ್ಯ ನಡೆಯಲಿದೆ.
ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳ ಕಾಡ್೯ಗಳನ್ನು ರದ್ದುಪಡಿಸಬಾರದು ಎಂದು ಇಲಾಖೆಯು ಸ್ಪಷ್ಟವಾದ ಸೂಚನೆ ನೀಡಿರುವ ಕಾರಣ, ಅತ್ಯಂತ ಜಾಗೃತವಾಗಿ ಪರಿಶೀಲನೆ ಕಾರ್ಯ ನಡೆಸಲಾಗಿದೆ.
ಆಧಾರ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹತೆ ಹೊಂದಿರುವವರು ಕಾರ್ಡ್‌ಗಳನ್ನು ಸರಿ ಪಡಿಸಿಕೊಳ್ಳಬಹುದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು. ಒಂದು ವೇಳೆ ಅರ್ಹ ಫಲಾನುಭವಿಗಳ ಕಾರ್ಡ್ ರದ್ದುಗೊಂಡಿದ್ದರೆ ಮತ್ತೆ ನೀಡಲಾಗುವುದು ಎಂದು ತಿಳಿಸಿದ್ದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ, ನಾವು ಬಡವರ ಅನ್ನ ಕಿತ್ತುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸುದ್ದಿಗೋಷ್ಠಿ ನಡೆಸಿ ಅರ್ಹರ ಕಾರ್ಡ್‌ಗಳು ರದ್ದುಗೊಂಡಿದ್ದರೆ ಒಂದು ವಾರದೊಳಗೆ ಸರಿಪಡಿಸುವುದಾಗಿ ಹೇಳಿದ್ದರು.
ಬಿಪಿಎಲ್ ಕಾರ್ಡ್ ತಿದ್ದುಪಡಿ ಹೇಗೆ?
ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಸರ್ಕಾರಿ ನೌಕರರ, ತೆರಿಗೆ ಪಾವತಿದಾರರ ಅನ್ನೋದನ್ನು ಪರಿಶೀಲಿಸಬೇಕು. ಕಾರ್ಡ್ ಹೊಂದಿರುವವರು ಬಡವರು ಇದ್ದಾರಾ? ಶ್ರೀಮಂತರು ಇದ್ದಾರಾ? ಅಂತ ಮನೆ ಪರಿಶೀಲಿಸಬೇಕು. ಆರ್‌ಡಿ ನಂಬರ್ ಪರಿಶೀಲನೆ ಮಾಡಬೇಕು. ಸ್ಥಳ ಪರಿಶೀಲನೆ ಜೊತೆಗೆ ದಾಖಲೆ ಪರಿಶೀಲನೆ ಮಾಡಬೇಕು. ಹೀಗೆ ಆಹಾರ ನಿರೀಕ್ಷಕರು ಒನ್ ಬೈ ಒನ್ ಆಗಿ ಕಾರ್ಡ್‌ಗಳನ್ನು ಪರಿವರ್ತನೆ ಮಾಡಬೇಕಿದೆ. ಏಕಾಏಕಿ ಮೂಲ ಸ್ಥಾನಕ್ಕೆ ಶಿಫ್ಟ್ ಮಾಡಲು ಆಗಲ್ಲ. ಎನ್‌ಐಸಿ ಸಾಫ್ಟ್‌ವೇರ್ ಮೂಲಕ ಕಾರ್ಡ್ ಕನ್ವರ್ಟ್ ಮಾಡಬೇಕು. ಕಾರ್ಡ್ ಬದಲಿಸಲು ಕನಿಷ್ಠ 10 ರಿಂದ 15 ದಿನ ಸಮಯಾವಕಾಶ ಬೇಕಾಗುತ್ತದೆ.
ಆದಾಯ ಪಾವತಿದಾರರ ಕಾರ್ಡ್ ರದ್ದು
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನೂ ರದ್ದು ಮಾಡದಿರುವ ಬಗ್ಗೆ ಆಹಾರ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಆಹಾರ ಇಲಾಖೆ ಆಯುಕ್ತರು, ಆದ್ಯತಾ ಪಡಿತರ ಚೀಟಿ (ಬಿಪಿಎಲ್)ಯನ್ನು ನೀಡಲು ಸರ್ಕಾರದಿಂದ ನಿಗದಿಪಡಿಸಿರುವ ಮಾನದಂಡಗಳನ್ನು ಪರಿಶೀಲಿಸಿ, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿತ್ತು. ಈ ಸಂಬಂಧ ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ, ಉಳಿದಂತೆ ತೆಗೆದುಕೊಂಡಿರುವ ಕ್ರಮಗಳನ್ನು ಮರುಸ್ತಾಪಿಸಲು ಕೂಡಲೇ ಕ್ರಮ ವಹಿಸಲು ಪತ್ರದಲ್ಲಿ ನಿರ್ದೇಶಿಸಲಾಗಿತ್ತು. ಇದೀಗ ಈ ಸಂಬಂಧ ಕೆಲ ಮಾರ್ಗಸೂಚಿಯನ್ನು ಇಲಾಖೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮರುಸ್ತಾಪನೆ ಕಾರ್ಯವನ್ನು ಮಾಡಲು ಆಹಾರ ತಂತ್ರಾಂಶದಲ್ಲಿ ಜಂಟಿ/ಉಪ ನಿರ್ದೇಶಕರ ಲಾಗಿನ್ನಲ್ಲಿ ಅವಕಾಶ ನೀಡಲಾಗಿದೆ. ನೋಡಲ್ ಅಧಿಕಾರಿ ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ಪ್ರಗತಿಯನ್ನು ಖುದ್ದು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಲಾಗಿದೆ.
ಹೀಗೆ ಮರುಸ್ತಾಪನೆಗೊಂಡಿರುವ ಪಿಹೆಚ್ಹೆಚ್(PHH) ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಹಂಚಿಕೆಯನ್ನು ಎನ್‌ಐಸಿ(NIC) ಸಹಯೋಗದೊಂದಿಗೆ 25/11/2024ರೊಳಗೆ ಜಂಟಿ ನಿರ್ದೇಶಕರು ಕ್ರಮವಹಿಸಬೇಕು. ಕುಟುಂಬ ತಂತ್ರಾಂಶದಿಂದ ಬಂದಿರುವ ಆದಾಯ ತೆರಿಗೆ ಪಾವತಿದಾರರು ಪಡಿತರ ಚೀಟಿಗಳ ರದ್ದತಿಯಲ್ಲಿ ಕೇವಲ ಆದಾಯ ತೆರಿಗೆ ಪಾವತಿದಾರರ ಪಡಿತರ ಚೀಟಿಗಳನ್ನು ಮಾತ್ರವೇ ರದ್ದು/ಅಮಾನತು/ಪರಿವರ್ತನೆ ಆಗುವಂತೆ ಆಯಾ ಜಂಟಿ/ಉಪ ನಿರ್ದೇಶಕರು ಕ್ರಮ ವಹಿಸಬೇಕು. ಇದಕ್ಕೆ ತಕ್ಕಂತೆ ಪೂರಕ ದಾಖಲೆಗಳನ್ನು ಪಡೆದು, ಪ್ರತಿಯೊಂದು ಪಡಿತರ ಚೀಟಿದಾರರ ದಾಖಲೆಗಳನ್ನು ಕಡತಗಳಲ್ಲಿ ಇರಿಸಬೇಕು ಎಂದು ತಿಳಿಸಲಾಗಿದೆ.
ಈ ಎಲ್ಲಾ ಕಾರ್ಯಗಳನ್ನು ಜಾಗೃತಿ ವಹಿಸಿ ಯಾವುದೇ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸಬೇಕು. 25/11/2024ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಕೇಂದ್ರದ ಸೂಚನೆಯಂತೆ ಪರಿಷ್ಕರಣೆ ಯತ್ನ:
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಗ್ರಾಮೀಣ ಭಾಗದಲ್ಲಿ ಶೇ.75 ಹಾಗೂ ನಗರ ಪ್ರದೇಶದಲ್ಲಿ ಶೇ.50 ಬಿಪಿಎಲ್ ಕಾರ್ಡ್ ಮಾತ್ರ ವಿತರಣೆ ಮಾಡಬಹುದು. ಇದರ ಪ್ರಕಾರ ರಾಜ್ಯದಲ್ಲಿ 4.01 ಕೋಟಿ ಸದಸ್ಯರು ಮಾತ್ರ ಬಿಪಿಎಲ್ ಸೌಲಭ್ಯಕ್ಕೆ ಅರ್ಹರು. ಆದರೆ, ರಾಜ್ಯದಲ್ಲಿ ಒಟ್ಟಾರೆ 1.24 ಕೋಟಿ ಕುಟುಂಬಗಳ 4.34 ಕೋಟಿ ಸದಸ್ಯರು ಬಿಪಿಎಲ್ ವ್ಯಾಪ್ತಿಯಲ್ಲಿದ್ದಾರೆ. ಅಂದರೆ ಶೇ.65.96 ಕಾರ್ಡ್ ಬಿಪಿಎಲ್ ಕಾರ್ಡ್ ಇದೆ.
ಕೇರಳದಲ್ಲಿ ಶೇ.45.59, ತಮಿಳುನಾಡು ಶೇ.48.81, ತೆಲಂಗಾಣ ಶೇ.53.93, ಆಂಧ್ರಪ್ರದೇಶ ಶೇ.63.79, ಮಹಾರಾಷ್ಟ್ರದಲ್ಲಿ ಶೇ.58.47ರಷ್ಟು ಮಾತ್ರ ಬಿಪಿಎಲ್ ಇದೆ. ದೇಶದಲ್ಲೇ ಎರಡನೇ ಅತಿಹೆಚ್ಚು ಆರ್ಥಿಕ ಪ್ರಗತಿ ಹೊಂದಿದ ರಾಜ್ಯದಲ್ಲಿ ಶೇ.65.96ರಷ್ಟು ಬಿಪಿಎಲ್ ಕುಟುಂಬ ಇರಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವಂತೆ ನಿರ್ದೇಶನ ನೀಡಿತ್ತು. ಕೇಂದ್ರದ ಮಾನದಂಡ ಅನ್ವಯ ಪರಿಷ್ಕರಣೆಗೆ ಮುಂದಾಗಿದ್ದೆವು.
1.02 ಲಕ್ಷ ಮಂದಿ ಅನರ್ಹರ ಬಿಪಿಎಲ್ ರದ್ದು:
ಪ್ರಸ್ತುತ ಅರ್ಹರ ಬಿಪಿಎಲ್ ಕಾರ್ಡ್ ರದ್ದುಪಡಿಸಿಲ್ಲ. ಒಂದೊಮ್ಮೆ ರದ್ದಾಗಿದ್ದರೆ ಕೂಡಲೇ ವಾಪಸು ನೀಡುತ್ತೇವೆ. ಪ್ರಸ್ತುತ ಆದಾಯ ತೆರಿಗೆ ಪಾವತಿಸುವ 98,473 ಹಾಗೂ ಸರ್ಕಾರಿ ನೌಕರರಾಗಿರುವ 4,036 ಮಂದಿ ಸೇರಿ 1.02 ಲಕ್ಷ ಮಂದಿಯ ಬಿಪಿಎಲ್ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಈ ಪೈಕಿ ಎರಡನೇ ಹಂತದ ಪರಿಶೀಲನೆ ಬಳಿಕ 68,017 ಬಿಪಿಎಲ್ ಕಾರ್ಡ್‌ಗಳನ್ನು ಅಮಾನತು ಮಾಡಿ ಎಪಿಎಲ್‌ಗೆ ಸೇರಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


