ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಧರ್ಮ ಧ್ವಜಾರೋಹಣ ಮಾಡಿದರು. ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಧರ್ಮಧ್ವಜಾರೋಹಣ ಕಾರ್ಯಕ್ರಮಕ್ಕೆ ಕೋಟ್ಯಾಂತರ ರಾಮನ ಭಕ್ತರು ಸಾಕ್ಷಿಯಾಗಿದ್ದಾರೆ.
ಮಂಗಳವಾರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜೊತೆ ನರೇಂದ್ರ ಮೋದಿ ಧರ್ಮಧ್ವಜಾರೋಹಣವನ್ನು ಮಾಡಿದರು. ಇದಕ್ಕೂ ಮೊದಲು ವಿವಿಧ ದೇವಾಲಯದಲ್ಲಿ ಅವರು ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಹಿಂದೂ ಪುರಾಣಗಳ ಪ್ರಕಾರ ದೇವಾಲಯದ ಮೇಲೆ ಧ್ವಜ ಹಾರಿಸುವುದು ಬಹಳ ಪ್ರಾಚೀನವಾದ ಸಂಪ್ರದಾಯವಾಗಿದೆ. ಗರುಡ ಪುರಾಣದಲ್ಲಿ ದೇವಾಲಯದ ಮೇಲೆ ಧ್ವಜ ಹಾರಿಸುವುದು ದೇವರ ಉಪಸ್ಥಿತಿಯನ್ನು ಸೂಚಿಸುತ್ತದೆ. ಗರುಡ ಹಾರುವ ಸಂಪೂರ್ಣ ಪ್ರದೇಶವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ದೇವಾಲಯದ ಶಿಖರದ ಮೇಲಿನ ಧ್ವಜವನ್ನು ದೇವರ ಮಹಿಮೆ, ಶಕ್ತಿ ಮತ್ತು ರಕ್ಷಣೆಯ ಸಂಕೇತ ಎಂದು ಹೇಳಲಾಗುತ್ತದೆ.
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಮಂಗಳವಾರ ಅಭಿಜಿನ್ ಮುಹೂರ್ತದಲ್ಲಿ 191 ಅಡಿ ಎತ್ತರದ ರಾಮ ಮಂದಿರದ ಮೇಲ್ಭಾಗದಲ್ಲಿ 11 ಅಡಿ ಅಗಲ ಮತ್ತು 22 ಅಡಿ ಉದ್ದದ ತ್ರಿಕೋನಾಕಾರದ ಕೇಸರಿ ಧ್ವಜವನ್ನು ಹಾರಿಸಲಾಗಿದೆ.
ಈ ಧ್ವಜದ ಮೇಲೆ ಸೂರ್ಯವಂಶಿ ಮತ್ತು ತ್ರೇತಾಯುಗದ ಚಿಹ್ನೆಗಳನ್ನು ಇರಿಸಲಾಗಿದೆ. ಧ್ವಜವು ಕೋವಿದಾರ ಮರದ ಚಿತ್ರ ಮತ್ತು ಓಂ ಚಿಹ್ನೆಯನ್ನು ಹೊಂದಿದೆ. ಈ ಧ್ವಜವನ್ನು ಅಹಮದಾಬಾದ್‌ನಲ್ಲಿ 25 ದಿನಗಳಲ್ಲಿ ತಯಾರು ಮಾಡಲಾಗಿದೆ. ಮೂರು ಪದರಗಳ ಬಟ್ಟೆಯಿಂದ ತಯಾರಿಸಲಾದ ಧ್ವಜಕ್ಕೆ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ.
ನರೇಂದ್ರ ಮೋದಿ ಮಾತು: ಧರ್ಮ ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿ ನರೇಂದ್ರ ಮೋದಿ, “ರಾಮ ಕೇವಲ ವ್ಯಕ್ತಿಯಲ್ಲ ಅವರು ಒಂದು ಮೌಲ್ಯ. 2047ರಲ್ಲಿ ನಾವು ವಿಕಸಿತ ಭಾರತವನ್ನು ಮಾಡಬೇಕಾದರೆ ರಾಮನ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು” ಎಂದು ನರೇಂದ್ರ ಮೋದಿ ಹೇಳಿದರು.
“ನಾವು ಮುಂಬರುವ ಸಾವಿರ ವರ್ಷಗಳಿಗೆ ಭಾರತದ ಅಡಿಗಲ್ಲನ್ನು ಗಟ್ಟಿಗೊಳಿಸಬೇಕಿದೆ. ಕೇವಲ ಪ್ರಸ್ತುತದ ಬಗ್ಗೆಯೇ ಯೋಚಿಸುವವರು ಮುಂದಿನ ಪೀಳಿಗೆಗೆ ಅನ್ಯಾಯ ಮಾಡುತ್ತಾರೆ. ನಾವು ಭವಿಷ್ಯದ ಪೀಳಿಗೆ ಬಗ್ಗೆಯೂ ಯೋಚಿಸಬೇಕು. ನಾವು ಇಲ್ಲದಿದ್ದಾಗಲೂ ಈ ದೇಶ ಇತ್ತು, ನಾವು ಇಲ್ಲದ ನಂತರವೂ ಈ ದೇಶ ಇರುತ್ತದೆ” ಎಂದರು.
“ರಾಮ ನಮ್ಮೊಂದಿಗೆ ಆತನ ಭಾವನೆಯ ಮೂಲಕ ಸಂಪರ್ಕಿಸುತ್ತಾನೆ. ಅವನ ವಂಶಾವಳಿ ಮುಖ್ಯವಲ್ಲ, ಭಕ್ತಿಯೇ ಮುಖ್ಯ. ಅವನಿಗೆ ಸಹಕಾರ ಮುಖ್ಯ, ಅಧಿಕಾರವಲ್ಲ. ಇಂದು ನಾವು ಅದೇ ಭಾವನೆಯೊಂದಿಗೆ ಮುಂದೆ ಹೆಜ್ಜೆ ಇಡುತ್ತೇವೆ” ಎಂದು ಮೋದಿ ಹೇಳಿದರು.
“ಕಳೆದ 11 ವರ್ಷಗಳಲ್ಲಿ ಸಮಾಜದ ಪ್ರತಿಯೊಂದು ವರ್ಗ ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳು, ಅತೀ ಹಿಂದುಳಿದ ವರ್ಗಗಳು, ಆದಿವಾಸಿಗಳು, ವಂಚಿತರು, ರೈತರು, ಕಾರ್ಮಿಕರು ಮತ್ತು ಯುವಕರು ಎಲ್ಲರನ್ನೂ ಅಭಿವೃದ್ಧಿಯ ಕೇಂದ್ರಬಿಂದುವಾಗಿ ಮಾಡಲಾಗಿದೆ” ಎಂದರು.
“2047ರಲ್ಲಿ ದೇಶ ಸ್ವಾತಂತ್ರ್ಯದ 100 ವರ್ಷ ಆಚರಿಸುವಾಗ ನಾವು ಒಂದು ವಿಕಸಿತ ಭಾರತವನ್ನು ನಿರ್ಮಿಸಿರಬೇಕು. ಮುಂದಿನ ಸಾವಿರ ವರ್ಷಗಳಿಗೆ ಭಾರತದ ಅಡಿಗಲ್ಲನ್ನು ಬಲಪಡಿಸಬೇಕು. ದೂರದೃಷ್ಟಿಯಿಂದ ಕೆಲಸ ಮಾಡಬೇಕು. ಮುಂದಿನ ದಶಕಗಳನ್ನೂ ಶತಮಾನಗಳನ್ನೂ ಮನಸ್ಸಿನಲ್ಲಿಟ್ಟುಕೊಂಡು ನಡೆಯಬೇಕು. ಶ್ರೀರಾಮನಿಂದ ನಾವು ಕಲಿಯಬೇಕು. ಅವನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


