ನಮೋ ಭಾರತ್ ರೈಲು. ಇದು ವಂದೇ ಭಾರತ್ ರೈಲು ಮಾದರಿಯಲ್ಲಿಯೇ ಖ್ಯಾತಿ ಪಡೆದಿರುವ ರೈಲು ಸೇವೆ. ರಾಷ್ಟ್ರೀಯ ರಾಜಧಾನಿ ಪ್ರಾಂತ್ಯ ಸಾರಿಗೆ ನಿಗಮ (ಎನ್‍ಸಿಆರ್‌ಟಿಸಿ) ಈ ರೈಲು ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ.
ರೈಲುಗಳಲ್ಲಿ ಸಿನಿಮಾ ಶೂಟಿಂಗ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮುಂತಾದ ಚಟುವಟಿಕೆ ನಡೆಸಲು ಕಠಿಣ ನಿಯಮವಿದೆ. ಆದರೆ ಇದೇ ಮೊದಲ ಬಾರಿಗೆ ಎನ್‍ಸಿಆರ್‌ಟಿಸಿ ನಮೋ ಭಾರತ್ ರೈಲಿನಲ್ಲಿ ನಿಗದಿ ಪಡಿಸಿದ ಬಾಡಿಗೆ ನೀಡಿ, ಪಾರ್ಟಿ, ಫೋಟೋ ಶೂಟ್ ಮಾಡಲು ವ್ಯವಸ್ಥೆ ಮಾಡಿಕೊಟ್ಟಿದೆ.
ಜನರಿಗೆ ಹೊಸ ಅನುಭವ ನೀಡುವುದು ಮತ್ತು ಆದಾಯ ಸಂಗ್ರಹವನ್ನು ಗುರಿಯಾಗಿಟ್ಟುಕೊಂಡು ನಮೋ ಭಾರತ್ ರೈಲಿನಲ್ಲಿ ಖಾಸಗಿ ಕಾರ್ಯಕ್ರಮ, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಅವಕಾಶ ನೀಡಲಾಗಿದೆ. ಜನರು ಈ ಸೇವೆಗೆ ಹೆಚ್ಚಿನ ಆಸಕ್ತಿ ತೋರಿಸುವ ನಿರೀಕ್ಷೆಯಲ್ಲಿ ಎನ್‍ಸಿಆರ್‌ಟಿಸಿ ಇದೆ.
ಎಷ್ಟು ಬಾಡಿಗೆ ಪಾವತಿಸಬೇಕು?: ಸದ್ಯ ಎನ್‍ಸಿಆರ್‌ಟಿಸಿ ದೆಹಲಿ-ಮೀರತ್ ಮಾರ್ಗ ರೈಲುಗಳಲ್ಲಿ ಮಾತ್ರ ಈ ವ್ಯವಸ್ಥೆಯನ್ನು ನೀಡಲಿದೆ. ಈ ಮಾರ್ಗದ ರೈಲುಗಳನ್ನು ವಿಶೇಷ ಸಂದರ್ಭಕ್ಕಾಗಿ ಬುಕ್ ಮಾಡಬಹುದಾಗಿದೆ.
ಇದರಲ್ಲಿ ಬರ್ತಡೇ ಪಾರ್ಟಿ, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮುಂತಾದ ಕಾರ್ಯಕ್ರಮಗಳು ಸೇರಿವೆ. ವಿಶ್ವದ ಇತರ ನಗರದಲ್ಲಿ ರೈಲಿನಲ್ಲಿ ಕಾರ್ಯಕ್ರಮ ನಡೆಸುವ ಮಾದರಿಯನ್ನು ನೋಡಿದ ಎನ್‍ಸಿಆರ್‌ಟಿಸಿ ಅದನ್ನು ಭಾರತದಲ್ಲಿ ಜಾರಿಗೊಳಿಸುತ್ತಿದೆ.
ಉತ್ತಮ ಸೌಲಭ್ಯವನ್ನು ಹೊಂದಿರುವ ನಿಲ್ದಾಣಗಳು, ಅತ್ಯಾಧುನಿಕ ವಿನ್ಯಾದ ರೈಲು ಬೋಗಿಯನ್ನು ಬಾಡಿಗೆ ನೀಡುವ ಮೂಲಕ ಇನ್ನಷ್ಟು ಜನರನ್ನು ಸಾರ್ವಜನಿಕ ಸಾರಿಗೆಯತ್ತ ಆಕರ್ಷಿಸಲು, ಆದಾಯ ಸಂಗ್ರಹ ಮಾಡಲು ಎನ್‍ಸಿಆರ್‌ಟಿಸಿ ಮುಂದಾಗಿದೆ.
ಎನ್‍ಸಿಆರ್‌ಟಿಸಿ ಮಾಹಿತಿ ಪ್ರಕಾರ ರೈಲಿನ ಒಂದು ಬೋಗಿಯನ್ನು ಬುಕ್ ಮಾಡಬಹುದು. ನಿಯಮಗಳ ಅನ್ವಯ ನಿಲ್ದಾಣದಲ್ಲಿ ಸಹ ಫೋಟೋ ಶೂಟ್ ಮಾಡಲು ಅವಕಾಶ ನೀಡಲಾಗುತ್ತದೆ ಮತ್ತು ರೈಲ್ವೆ ಆಸ್ತಿಯನ್ನು ಸಹ ಈ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದು.
ರೈಲು ಬಾಡಿಗೆ ಪಡೆಯಲು ಸಾಮಾನ್ಯ ದರ ಒಂದು ಗಂಟೆಗೆ 5 ಸಾವಿರ ರೂ.ಗಳು. ಇದರಲ್ಲಿ ಅರ್ಧ ಗಂಟೆ ಎಲ್ಲವನ್ನು ತಯಾರಿ ಮತ್ತು ಅರ್ಧ ಗಂಟೆ ಪ್ಯಾಕಪ್‌ಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಎಲ್ಲಾ ಕಾರ್ಯಕ್ರಮಗಳನ್ನು ಬೆಳಗ್ಗೆ 6 ರಿಂದ ರಾತ್ರಿ 11ರ ತನಕ ಮಾತ್ರ ನಡೆಸಲು ಸಾಧ್ಯವಿದೆ. ಬಾಡಿಗೆ ಪಡೆದವರು ಎನ್‍ಸಿಆರ್‌ಟಿಸಿ ನಿಯಮಗಳ ಅನ್ವಯ ರೈಲು ಬೋಗಿಯನ್ನು ಅಲಂಕಾರ ಮಾಡಲು ಸಹ ಅವಕಾಶವಿದೆ. ಆದರೆ ರೈಲ್ವೆಯ ಯಾವುದೇ ಆಸ್ತಿಯನ್ನು ಡ್ಯಾಮೇಜ್ ಮಾಡುವಂತಿಲ್ಲ.
ಎನ್‍ಸಿಆರ್‌ಟಿಸಿ ಈ ಕಾರ್ಯಕ್ರಮಗಳ ಸಂದರ್ಭದಲ್ಲಿ ತನ್ನ ಸಿಬ್ಭಂದಿಗಳನ್ನು ಭದ್ರತೆಗಾಗಿ ಮತ್ತು ಸಹಾಯಕ್ಕಾಗಿ ನಿಯೋಜನೆ ಮಾಡುತ್ತದೆ. ಆದರೆ ಈ ಕಾರ್ಯಕ್ರಮಗಳು ನಿಗದಿತ ರೈಲು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುವಂತಿಲ್ಲ.
ಅಲ್ಲದೇ ಎನ್‍ಸಿಆರ್‌ಟಿಸಿ ಸಿನಿಮಾ ಶೂಟಿಂಗ್, ಜಾಹೀರಾತು ಚಿತ್ರೀಕರಣ, ಡಾಕ್ಯುಮೆಂಟರಿ ಚಿತ್ರೀಕರಣ, ಡಿಜಿಟಲ್ ಕಟೆಂಟ್ ಕ್ರಿಯೇಟ್ ಮಾಡಲು ಸಹ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಡಿಮೆ ಅವಧಿಯ ಸ್ಲಾಟ್‌ಗಳನ್ನು ಇದಕ್ಕಾಗಿ ನಿಗದಿಗೊಳಿಸಲಾಗಿದೆ.
ಭಾರತೀಯ ರೈಲ್ವೆ ದೇಶದ ಪ್ರಮುಖ ನಗರಗಳ ನಡುವೆ ವೇಗವಾಗಿ ಸಂಪರ್ಕವನ್ನು ಸಾಧಿಸಲು ನಮೋ ಭಾರತ್ ಮಾದರಿ ರೈಲು ಪರಿಚಯಿಸಿದೆ. ದೇಶದ ಮೊದಲ ನಮೋ ಭಾರತ್ ರೈಲಿಗೆ 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


