ಬೆಂಗಳೂರು ನಗರದ ಅತ್ಯಂತ ಜನನಿಬೀಡ ಪ್ರದೇಶ ಮೆಜೆಸ್ಟಿಕ್ ಸಂಪೂರ್ಣ ಬದಲಾಗಲಿದೆ. ಕರ್ನಾಟಕ ಸರ್ಕಾರ 2025-26ರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ 32 ಎಕರೆ ಪ್ರದೇಶವನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುತ್ತದೆ. 2026ರಲ್ಲಿ ಈ ಮಹತ್ವದ ಯೋಜನೆಗೆ ಸರ್ಕಾರ ಟೆಂಡರ್ ಕರೆಯುವ ನಿರೀಕ್ಷೆ ಇದೆ.
ಈ ಯೋಜನೆಗೆ ಕೆಎಸ್ಆರ್‌ಟಿಸಿ ಗುರುಗ್ರಾಮ ಮೂಲದ ಕಂಪನಿಯನ್ನು ಉಸ್ತುವಾರಿಯಾಗಿ ನೇಮಕ ಮಾಡಿದೆ. ಯೋಜನೆಯ ಪ್ರಸ್ತಾವನೆಯನ್ನು ಈ ಕಂಪನಿ ಸಿದ್ದಪಡಿಸಿ ನೀಡಲಿದೆ. ಸುಮಾರು 1,500 ಕೋಟಿ ರೂ. ಮೊತ್ತದಲ್ಲಿ ಮೆಜೆಸ್ಟಿಕ್ ಪ್ರದೇಶ ಅಭಿವೃದ್ಧಿಯಾಗಲಿದೆ.
2025-26ರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಈ ಕಂಪನಿ ಯೋಜನೆಗೆ ಅಗತ್ಯ ಇರುವ ಭೂಮಿ, ಸಂಚಾರ ದಟ್ಟಣೆ, ವಾಣಿಜ್ಯ ವಹಿವಾಟು ಮುಂತಾದವುಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲಿದೆ. ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಜನವರಿಯಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದೆ.
ಹೇಗಿರಲಿದೆ ಯೋಜನೆ?: ಮಜೆಸ್ಟಿಕ್ ಪುನರ್ ಅಭಿವೃದ್ಧಿ ಯೋಜನೆಯಡಿ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣವನ್ನು ನೆಲಸಮ ಮಾಡಲಾಗುತ್ತದೆ. 32 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ಮತ್ತು ವಾಣಿಜ್ಯ ಚಟುವಟಿಕೆ ಹಬ್ ನಿರ್ಮಾಣವಾಗಲಿದೆ.
ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲು ನಿಲ್ದಾಣ, ಸಬ್ ಅರ್ಬನ್ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಜೊತೆ ಅದಾಯ ಹಂಚಿಕೆ ಮಾಡಿಕೊಳ್ಳುವ ರೀತಿಯಲ್ಲಿ ಖಾಸಗಿ ಸಂಸ್ಥೆಗಳು ವಾಣಿಜ್ಯ ಚಟುವಟಿಕೆ ಕೈಗೊಳ್ಳಲು ಜಾಗ ಒದಗಿಸಲಾಗುತ್ತದೆ.
ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪ್ರತಿದಿನ ಸುಮಾರು 80,000 ಪ್ರಯಾಣಿಕರು ಮತ್ತು ಬಿಎಂಟಿಸಿ ನಿಲ್ದಾಣಕ್ಕೆ ಸುಮಾರು 4 ಲಕ್ಷ ಪ್ರಯಾಣಿಕರು ಭೇಟಿ ನೀಡುತ್ತಾರೆ. ಪ್ರತಿದಿನ 11,150 ಬಸ್‌ಗಳು ಈ ಪ್ರದೇಶದಿಂದ ಸಂಚಾರ ನಡೆಸುತ್ತದೆ.
ಇದು 1,500 ಕೋಟಿ ರೂ. ಯೋಜನೆಯಾಗಿದೆ. ಯೋಜನೆ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಹಂತ ಹಂತವಾಗಿ ಎಲ್ಲವೂ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೆಟ್ರೋ, ರೈಲು ಮತ್ತು ಬಸ್ ನಿಲ್ದಾಣವನ್ನು ಉತ್ತಮವಾಗಿ ಸಂಪರ್ಕಿಸುವ ಮಾದರಿಯಲ್ಲಿ ಸಾರಿಗೆ ಹಬ್ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಾಣವಾಗಲಿದೆ. ಖಾಸಗಿ ಸಂಸ್ಥೆಗಳಿಗೆ ಆದಾಯ ಹಂಚಿಕೆ ಒಪ್ಪಂದದ ಅನ್ವಯ ಅವುಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಸರ್ಕಾರದಿಂದ ಯಾವುದೇ ಹೂಡಿಕೆ ಮಾಡುತ್ತಿಲ್ಲ, ಕಂಪನಿಗಳೇ ಹೂಡಿಕೆ ಮಾಡುತ್ತವೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಸದ್ಯ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ ಅಂಡರ್ ಪಾಸ್ ಮೂಲಕ ಸಂಪರ್ಕವಿದೆ. ಆದರೆ ಅದು ಅಷ್ಟು ಸುಲಭದ ಮಾರ್ಗವಲ್ಲ. ಬಸ್, ಮೆಟ್ರೋ, ರೈಲು ನಿಲ್ದಾಣವನ್ನು ಸುಲಭವಾಗಿ ಸಂಪರ್ಕಿಸುವಂತೆ ಹೊಸ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಬಿಎಂಟಿಸಿ ಈ ಪ್ರದೇಶದಿಂದ 8,200 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತದೆ. ಇಲ್ಲಿ ಕಾಮಗಾರಿ ಕೈಗೊಂಡರೆ ಆಗುವ ಸಂಚಾರ ದಟ್ಟಣೆಯ ಕುರಿತು ಅಧ್ಯಯನ ನಡೆಸಲಾಗುತ್ತದೆ. 1969ರ ಬಳಿಕ ಇಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಅದಕ್ಕೂ ಮೊದಲು ಇದು ಕರೆ ಪ್ರದೇಶವಾಗಿತ್ತು.
ನಮ್ಮ ಮೆಟ್ರೋದ ನಗರದ ಅತಿ ದೊಡ್ಡ ಇಂಟರ್ ಚೇಂಜ್ ನಿಲ್ದಾಣ ಮೆಜೆಸ್ಟಿಕ್ ಪ್ರದೇಶದಲ್ಲಿದೆ. ಇದನ್ನು ಕಮರ್ಷಿಯಲ್ ಹಬ್ ಆಗಿ ಪರಿವರ್ತನೆ ಮಾಡುವ ಕಾರ್ಯವನ್ನು ಬಿಎಂಆರ್‌ಸಿಎಲ್ ಮಾಡುತ್ತದೆ. ಆದರೆ ಕೆಎಸ್ಆರ್‌ಟಿಸಿ, ಬಿಎಂಟಿಸಿ ನಿಲ್ದಾಣಕ್ಕೆ ಮಾತ್ರ ವಾಣಿಜ್ಯ ಸಂಕೀರ್ಣವನ್ನು ಯೋಜನೆಯಡಿ ನಿರ್ಮಾಣ ಮಾಡಲಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


