ನಿನ್ನೆ ( ಜನವರಿ 25 ) ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ಈ ಪೈಕಿ ಕನ್ನಡದ ನಟ ಅನಂತ್‌ನಾಗ್ ಸೇರಿದಂತೆ ತೆಲುಗಿನ ನಂದಮೂರಿ ಬಾಲಕೃಷ್ಣ ಹಾಗೂ ತಮಿಳಿನ ಅಜಿತ್ ಕುಮಾರ್ ಅವರಿಗೂ ಸಹ ಪದ್ಮ ಪ್ರಶಸ್ತಿ ಗೌರವ ಸಂದಿವೆ.
ಹೀಗೆ ಮನರಂಜನೆ ಕ್ಷೇತ್ರದಲ್ಲಿ ಬಂದ ಪ್ರಶಸ್ತಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದು, ನಂದಮೂರಿ ಬಾಲಕೃಷ್ಣ ಅವರಿಗೆ ಪ್ರಶಸ್ತಿ ನೀಡಿದ್ದು ಸರಿಯಲ್ಲ ಎಂದು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡಿಸಲು ಬರುವ ಅಭಿಮಾನಿಗಳ ಜತೆ ಸಿಡುಕುವ ಹಾಗೂ ಸೆಲ್ಫಿಗೆಂದು ಬರುವ ಅಭಿಮಾನಿಗಳ ಮೊಬೈಲ್ ಕಿತ್ತು ಬಿಸಾಡುವ ಬಾಲಯ್ಯನಿಗೇಕೆ ಪದ್ಮ ಪ್ರಶಸ್ತಿ ಎಂದು ಕೆಲವರು ಟ್ರೋಲ್ ಮಾಡಿದ್ದರೆ, ಇನ್ನೂ ಕೆಲವರು ಇತ್ತೀಚೆಗೆ ಬಿಡುಗಡೆಯಾದ ಡಾಕು ಮಹಾರಾಜ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಬಾಲಯ್ಯ ನಟಿ ಊರ್ವಶಿ ರೌಟೆಲಾ ಜತೆ ಮಾಡಿದ ಡಾನ್ಸ್ ವಿಡಿಯೊ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.
ಇನ್ನು ಮತ್ತೊಂದೆಡೆ ಬಾಲಯ್ಯ ಬಿಜೆಪಿ ಹಾಗೂ ಟಿಡಿಪಿಯ ಎಂಎಲ್‌ಎ ಹೀಗಾಗಿ ಬಾಲಯ್ಯ ಅವರಿಗೆ ಪ್ರಶಸ್ತಿ ಲಭಿಸಿದೆ ಎಂದೂ ಸಹ ಕಾಮೆಂಟ್ ಮಾಡುತ್ತಿದ್ದಾರೆ.
ಹೀಗೆ ಒಂದೆಡೆ ಬಾಲಯ್ಯ ಪದ್ಮ ಪ್ರಶಸ್ತಿಗೆ ಅನರ್ಹ ಎಂದು ಬಿಂಬಿಸುವಂತಹ ಪೋಸ್ಟ್‌ಗಳು ಹರಿದಾಡುತ್ತಿದ್ದು, ಮತ್ತೊಂದೆಡೆ ಬಾಲಯ್ಯ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಿ ಸಹಾಯ ಮಾಡಿದ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಬಾಲಯ್ಯ ಅಭಿಮಾನಿಗಳು ತಮ್ಮ ನಟನ ಸೇವೆಗೆ ಪದ್ಮ ಪ್ರಶಸ್ತಿ ಸಂದಿದೆ ಎಂದು ಬರೆದುಕೊಳ್ಳುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


